ರಾಜ್ಯದ 372 ತಾಲ್ಲೂಕುಗಳಲ್ಲಿ ಸ್ಮಶಾನ ಇಲ್ಲ: ಸಚಿವ ಆರ್.ಅಶೋಕ

Prasthutha|

ಬೆಂಗಳೂರು: ರಾಜ್ಯದ ಎಲ್ಲಾ ಗ್ರಾಮಗಳಲ್ಲೂ ಸ್ಮಶಾನ ಇರಬೇಕು ಎಂಬ ಗುರಿ ಹೊಂದಿದ್ದು, ಇದಕ್ಕಾಗಿ ಮೂರು ವರ್ಷಗಳಲ್ಲಿ ರಾಜ್ಯ ಸರ್ಕಾರ 26 ಕೋಟಿ ಬಿಡುಗಡೆ ಮಾಡಿದೆ. ರಾಜ್ಯದ 372 ತಾಲ್ಲೂಕುಗಳಲ್ಲಿ ಸ್ಮಶಾನ ಇಲ್ಲ ಎಂಬ ವರದಿ ಇದೆ. ಸರ್ಕಾರ ಹಣ ನೀಡುತ್ತದೆ. ಆದರೆ ಕೃಷಿ ಭೂಮಿಯ ಬೆಲೆ ಹೆಚ್ಚಿರುವುದರಿಂದ, ನಿಗದಿ ಮಾಡಿರುವ ದರದಲ್ಲಿ ಭೂಮಿ ಖರೀದಿ ಮಾಡಲಾಗುತ್ತಿಲ್ಲ. ಅದಕ್ಕಾಗಿ ಜಿಲ್ಲಾಧಿಕಾರಿಗಳಿಂದ ವಿಶೇಷ ಪ್ರಸ್ತಾವನೆ ಪಡೆದು ಹೆಚ್ಚುವರಿ ಹಣ ನೀಡಿ, ಸ್ಮಶಾನಕ್ಕಾಗಿ ಭೂಮಿ ಖರೀದಿ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದ್ದಾರೆ.


ವಿಧಾನ ಪರಿಷತ್ ನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ನಗರ ಪ್ರದೇಶಗಳ ಅಕ್ರಮ ಸಕ್ರಮ ಯೋಜನೆಗೆ ಉಭಯ ಸದನಗಳು ಅಂಗೀಕಾರ ನೀಡಿವೆ. ಆದರೆ ಯೋಜನೆ ಜಾರಿಯ ಹಂತದಲ್ಲಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ಇದು ಜಾರಿಯಾದರೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ 15 ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಲಿದೆ. ಬಿಬಿಎಂಪಿಗೆ ಆರು ಸಾವಿರ ಕೋಟಿ ರೂಪಾಯಿ ಆದಾಯ ಬರಲಿದೆ. ತಾವು ಇತ್ತೀಚೆಗೆ ಮುಖ್ಯಮಂತ್ರಿಗಳ ಜೊತೆ ದೆಹಲಿಗೆ ಭೇಟಿ ನೀಡಿದ ವೇಳೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಭೇಟಿ ಮಾಡಿ, ನ್ಯಾಯಾಲಯದ ತಗಾದೆ ಇತ್ಯರ್ಥ ಪಡಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ. ರಾಜ್ಯ ಸರ್ಕಾರದಿಂದ ಮತ್ತೊಂದು ಪ್ರಮಾಣ ಪತ್ರ ಸಲ್ಲಿಸಲು ಕೇಂದ್ರ ಸಚಿವರು ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.

- Advertisement -

ಬಿಡಿಎ ಬಡಾವಣೆಗಳಲ್ಲಿ ಅಕ್ರಮ ಮನೆ ನಿರ್ಮಾಣದ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಅದರ ಪ್ರಕಾರ ಶಿವರಾಮ ಕಾರಂತರ ಬಡಾವಣೆಯಲ್ಲಿ ನಿಯಮ ಮೀರಿ ನಿವೇಶನ ನೋಂದಣಿ ಮಾಡಿದ ಐದು ಮಂದಿ ಉಪನೋಂದಣಾಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದರು.

ನಗರ ಪ್ರದೇಶಗಳನ್ನು ಹೊರತು ಪಡಿಸಿ ಗ್ರಾಮಾಂತರ ಪ್ರದೇಶದಲ್ಲಿ ಅಕ್ರಮ-ಸಕ್ರಮಕ್ಕೆ ಯಾವುದೇ ಅಡ್ಡಿ ಇಲ್ಲ. ಗ್ರಾಮ ಪಂಚಾಯತ್ನಲ್ಲಿ ಕ್ರಮ ಬದ್ಧ ಹಾಗೂ ಕ್ರಮ ಬದ್ಧವಲ್ಲದ ಆಸ್ತಿಗಳ ವಿವರಗಳನ್ನು ಗ್ರಾಮೀಣ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಪಡೆಯುತ್ತಿದ್ದಾರೆ ಎಂದರು.

ರಾಜ್ಯದಲ್ಲಿ 1400 ಕಂದಾಯ ಗ್ರಾಮಗಳಿಗೆ ಕಂದಾಯ ಗ್ರಾಮಗಳೆಂದು ನೋಟಿಫಿಕೇಷನ್ ಮಾಡಿ, 803 ಗಾಮಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಕಳೆದ ಎರಡು ತಿಂಗಳ ಹಿಂದೆಯೇ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಕಂದಾಯ ಗ್ರಾಮಗಳ ಘೋಷಣೆ ಬಗ್ಗೆ ಆದ್ಯತೆ ನೀಡುವಂತೆ ಸೂಚಿಸಲಾಗಿದೆ ಎಂದರು.

ನಸೀರ್ ಅಹಮ್ಮದ್ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಕಂದಾಯ ಇಲಾಖೆಯಲ್ಲಿ ಲೆಕ್ಕಾಧಿಕಾರಿಗಳು ಮತ್ತು ದ್ವಿತೀಯ ದರ್ಜೆ ಸಹಾಯಕರ ವೇತನವೂ ಒಂದೇ ಆಗಿದೆ. ಎರಡು ವೃಂದದ ಜೇಷ್ಠತಾ ಪಟ್ಟಿ ತಯಾರಿಸಿ ಪ್ರಕಟಿಸಲಾಗಿದೆ. ಆಕ್ಷೇಪಣೆಗಳನ್ನು ಪರಿಶೀಲಿಸಿದ ಬಳಿಕ ಶೀಘ್ರವೇ ಬಡ್ತಿ ನೀಡಲಾಗುವುದು ಎಂದು ಹೇಳಿದರು.

- Advertisement -