ಮೈಸೂರು: ಕರ್ನಾಟಕದಲ್ಲಿ ಸಚಿವ ಸಂಪುಟ ಪುನಾರಚನೆ ಪ್ರಸ್ತಾಪ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಬುಧವಾರ ಸ್ಪಷ್ಟಪಡಿಸಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಬಿ ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಅನೇಕರು ಕೇಳಿದ್ದಾರೆ. ಉಪಚುನಾವಣೆ ಬಳಿಕ ನೋಡೋಣ ಎಂದಿದ್ದೇನೆ. ಅದನ್ನೇ ಸಂಪುಟ ಪುನಾರಚನೆ ಎಂದು ಬಿಂಬಿಸಬೇಡಿ ಎಂದು ಹೇಳಿದರು.
ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂ. ಅವ್ಯವಹಾರದ ಆರೋಪದಲ್ಲಿ ಜೈಲುಪಾಲಾಗಿ ಬಿಡುಗಡೆಯಾಗಿರುವ ನಾಗೇಂದ್ರಗೆ ಮತ್ತೆ ಸಚಿವ ಸ್ಥಾನ ನೀಡುವ ಬಗ್ಗೆ ಸಿದ್ದರಾಮಯ್ಯ ಮಂಗಳವಾರ ಸುಳಿವು ನೀಡಿದ್ದರು. ಇದರ ಬೆನ್ನಲ್ಲೇ ಸಂಪುಟ ಪುನಾರಚನೆ ವದಂತಿ ಹಬ್ಬಿತ್ತು. ಇದೀಗ ಸಿದ್ದರಾಮಯ್ಯ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಮಾಡಿದ್ದು ಸಾಬೀತಾದರೆ ರಾಜಕೀಯವನ್ನೇ ಬಿಡುತ್ತೇನೆ. ಒಂದೇ ಒಂದು ಪೈಸೆ ಭ್ರಷ್ಟಾಚಾರ ಮಾಡಿದ್ದರೆ ರಾಜಕೀಯ ಬಿಡುತ್ತೇನೆ. ನರೇಂದ್ರ ಮೋದಿ ಪ್ರಧಾನಿ ಸ್ಥಾನ ತ್ಯಜಿಸುತ್ತಾರಾ ಕೇಳಿ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಬಿಜೆಪಿಯವರು ಭ್ರಷ್ಟಾಚಾರ ಎಂದು ಬರೀ ಸುಳ್ಳು ಹೇಳುತ್ತಿದ್ದಾರೆ. ಕೋವಿಡ್ ವೇಳೆ ನಡೆದ ಭ್ರಷ್ಟಾಚಾರ ಬಗ್ಗೆ ಪ್ರಧಾನಿ ಏನು ಹೇಳುತ್ತಾರೆ? ಪ್ರಧಾನಿ ಮೋದಿಗೆ ಕರ್ನಾಟಕ ಹಾಗೂ ಸಿದ್ದರಾಮಯ್ಯ ಟಾರ್ಗೆಟ್. ಕರ್ನಾಟಕ ಅತಿ ದೊಡ್ಡ ರಾಜ್ಯ, ಇಲ್ಲಿ ನಾವು 136 ಸ್ಥಾನ ಗೆದ್ದಿದ್ದೇವೆ. ಹೀಗಾಗಿ ನಮ್ಮನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.