ಚುನಾವಣೆ ಫ‌ಲಿತಾಂಶ ಬಳಿಕ ಸಚಿವ ಸಂಪುಟ ಪುನಾರಚನೆ ಇಲ್ಲ: ಸಿದ್ದರಾಮಯ್ಯ

Prasthutha|

ಬೆಂಗಳೂರು: ಚುನಾವಣೆ ಫ‌ಲಿತಾಂಶದ ಬಳಿಕ ಸಚಿವ ಸಂಪುಟ ಪುನಾರಚನೆ ಮಾಡುವ ಯಾವುದೇ ಆಲೋಚನೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಾರ್ವತ್ರಿಕ ಚುನಾವಣೆಯಲ್ಲಿ ವ್ಯತಿರಿಕ್ತ ಫ‌ಲಿತಾಂಶ ಬಂದರೆ ತಲೆದಂಡ ಆಗಬಹುದು ಎಂಬ ಭೀತಿಯಲ್ಲಿರುವ ಸಚಿವರಿಗೆ ಈ ಮೂಲಕ ಸರಕಾರಕ್ಕೆ ಒಂದು ವರ್ಷ ತುಂಬಿದ ದಿನವೇ ಮುಖ್ಯಮಂತ್ರಿ ಸಿದ್ದರಾಮಯ್ಯ ತಾತ್ಕಾಲಿಕ ನಿರಾಳತೆ ನೀಡಿದ್ದಾರೆ.

- Advertisement -

ಸರಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬೆಂಗಳೂರು ಪ್ರಸ್‌ ಕ್ಲಬ್‌ ಸೋಮವಾರ ಹಮ್ಮಿಕೊಂಡಿದ್ದ ಮಾಧ್ಯಮದೊಂದಿಗೆ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ, ತೆರಿಗೆ ಹಂಚಿಕೆ, ಅನ್ನಭಾಗ್ಯಕ್ಕೆ ಅಕ್ಕಿ ನೀಡದಿರುವುದು ಸಹಿತ ಹಲವಾರು ವಿಷಯಗಳಲ್ಲಿ ಕೇಂದ್ರದ ಅಸಹಕಾರ ನಡುವೆಯೂ ಕಳೆದ ಒಂದು ವರ್ಷದ ಆಡಳಿತ ನನಗೆ, ನಮ್ಮ ಪಕ್ಷ ಮತ್ತು ಹೈಕಮಾಂಡ್‌ಗೆ ತೃಪ್ತಿ ತಂದಿದೆ. ಮುಂದಿನ ದಿನಗಳಲ್ಲೂ ಜನಮುಖೀ ಆಡಳಿತ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ಪಕ್ಷದ ಹೈಕಮಾಂಡ್‌ ಮತ್ತು ನಾಯಕರ ಸೂಚನೆ ಬಳಿಕವೂ ಹಲವು ರೀತಿಯ ಪ್ರಭಾವ ಬೀರಿ ಚುನಾವಣ ಕಣಕ್ಕಿಳಿಯುವುದರಿಂದ ತಪ್ಪಿಸಿಕೊಂಡ ಸಚಿವರಿಗೆ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಂಡು ಬರುವ ಟಾಸ್ಕ್ ನೀಡಿದ್ದರು. ಒಂದು ವೇಳೆ ಈ ನಿಟ್ಟಿನಲ್ಲಿ ವಿಫ‌ಲವಾದರೆ ತಲೆದಂಡ ಎಂಬ ಎಚ್ಚರಿಕೆಯನ್ನೂ ನೀಡಲಾಗಿತ್ತು. ಇದೇ ಕಾರಣಕ್ಕೆ ಕೆಲವು ಸಚಿವರು ತಮ್ಮ ಮಕ್ಕಳು, ಸಂಬಂಧಿಕರನ್ನೇ ಅಖಾಡಕ್ಕಿಳಿಸಿ ಪ್ರತಿಷ್ಠೆಯನ್ನು ಒರೆಗೆ ಹಚ್ಚಿದ್ದರು. ಆದರೂ ಫ‌ಲಿತಾಂಶದಲ್ಲಿ ವ್ಯತ್ಯಾಸವಾದರೆ ಹೇಗೆ ಎಂಬ ಆತಂಕ ಮನೆ ಮಾಡಿದೆ. ಇಂಥ ಹೊತ್ತಿನಲ್ಲಿ ಸಿಎಂ ಹೇಳಿಕೆ ಭೀತಿಯನ್ನು ದೂರ ಮಾಡಿದೆ.



Join Whatsapp