ಬೆಂಗಳೂರು: ಹನುಮಾನ್ ಚಾಲೀಸಾ ಹಾಕಿದ್ದಕ್ಕಾಗಲೀ ಅಥವಾ ಅಜಾನ್ ಪ್ರಾರ್ಥನೆಗೆ ಅಡ್ಡಿಯಾಗುತ್ತಿದೆ ಎಂದು ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆದಿಲ್ಲ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ನಗರದ ನಗರತಪೇಟೆಯಲ್ಲಿ ಹನುಮಾನ್ ಜಾಲೀಸಾ ಹಾಕಿದ್ದಕ್ಕೆ ಮೊಬೈಲ್ ಸ್ಪೇರ್ ಪಾರ್ಟ್ಸ್ ಅಂಗಡಿಯ ಮಾಲೀಕನ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಘಟನೆ ಸಂಬಂಧ ಭಾನುವಾರ ರಾತ್ರಿ 10.30ಕ್ಕೆ ಕಬ್ಬನ್‌ಪೇಟೆ ನಿವಾಸಿ ಜಿ ಮುಖೇಶ್ ಅವರು, ಸುಲೇಮಾನ್, ಶಹನವಾಜ್, ರೋಹಿತ್, ದ್ಯಾನೀಶ್, ತರುಣ ಹಾಗೂ ಇತರರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ದೂರು ಹಿನ್ನೆಲೆಯಲ್ಲಿ ಹಲಸೂರು ಗೇಟ್ ಪೊಲೀಸರು ಮೂವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಪೊಲೀಸರು, ಹನುಮಾನ್ ಚಾಲೀಸಾ ಹಾಕಿದ್ದಕ್ಕಾಗಲೀ ಅಥವಾ ಅಜಾನ್ ಪ್ರಾರ್ಥನೆಗೆ ಅಡ್ಡಿಯಾಗುತ್ತಿದೆ ಎಂದು ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆದಿಲ್ಲ ಎಂದು ಹೇಳಿದ್ದಾರೆ.ಆರೋಪಿಗಳ ಮೇಲೆ ಆರೋಪಗಳ ಸಾಬೀತು ಪಡಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಹೇಳಿಕೆ ನೀಡಿದಂತೆಯೇ ದೂರಿನಲ್ಲಿ ಆರೋಪಗಳನ್ನು ಉಲ್ಲೇಖ ಮಾಡಿಲ್ಲ ಎಂದು ತನಿಖೆಯ ಭಾಗವಾಗಿರುವ ಅಧಿಕಾರಿಯೊಬ್ಬರು ಹೇಳಿದ್ದಾರೆ.