ಆರ್ಥಿಕ ಸಮಸ್ಯೆ| ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

Prasthutha|

ನಿಝಾಮಾಬಾದ್‌: ವ್ಯವಹಾರದಲ್ಲಿ ನಷ್ಟ ಮತ್ತು ಪಾಲುದಾರರು ವಂಚಿಸಿದ್ದಾರೆ ಎಂದು ಪತ್ರ ಬರೆದಿಟ್ಟು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ನಿಜಾಮಾಬಾದ್‌ನಲ್ಲಿ ನಡೆದಿದೆ.  ಮೃತರನ್ನು ಕೆ ಸೂರ್ಯಪ್ರಕಾಶ್ (37), ಪತ್ನಿ ಅಕ್ಷಯ (35), ಮಗಳು ಪ್ರತ್ಯೂಷಾ (13) ಮಗ ಅದ್ವಿತ್ (7) ಎಂದು ಗುರುತಿಸಲಾಗಿದೆ.

- Advertisement -

15 ದಿನಗಳ ಹಿಂದೆ ನಿಝಾಮಾಬಾದ್‌ಗೆ ಬಂದಿದ್ದ ಸೂರ್ಯಪ್ರಕಾಶ್‌ ಕುಟುಂಬ, ನಗರದ ಕಪಿಲಾ ಹೋಟೆಲ್‌ನಲ್ಲಿ ತಂಗಿದ್ದರು. ಕಳೆದ ಎರಡು ದಿನದಿಂದ ಕೊಠಡಿಯ ಬಾಗಿಲು ತೆರೆಯದೇ ಇದ್ದಾಗ ಹೊಟೇಲ್ ಸಿಬ್ಬಂದಿ ಸಂಶಯಗೊಂಡು ಪೊಲೀಸರಿಗೆ ಕರೆ ಮಾಹಿತಿ ನೀಡಿದ್ದರು. ಪೊಲೀಸರು ಬಂದು ಕೊಠಡಿಯ ಬಾಗಿಲು ಒಡೆದು ನೋಡಿದಾಗ ಸೂರ್ಯಪ್ರಕಾಶ್ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಪತ್ನಿ ಮತ್ತು ಇಬ್ಬರು ಮಕ್ಕಳು ಹಾಸಿಗೆಯ ಮೇಲೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸೂರ್ಯಪ್ರಕಾಶ್ ಬರೆದ ಪತ್ರವನ್ನು ಹೊಟೇಲ್ ಕೊಠಡಿಯಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.  

ʻಆದಿಲಾಬಾದ್ ಮತ್ತು ಹೈದರಾಬಾದ್‌ನಲ್ಲಿ ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುತ್ತಿದೆ. ಆದರೆ  ಆರ್ಥಿಕ ಸಮಸ್ಯೆ ಮತ್ತು ಲಾಭದ ಹಂಚಿಕೆಯಲ್ಲಿ ನಾಲ್ವರು ಪಾಲುದಾರರು ನಿರಂತರ ಕಿರುಕುಳ ನೀಡುತ್ತಿದ್ದಾರೆ ಹೀಗಾಗಿ ಕಠಿಣ ನಿರ್ಧಾರಕ್ಕೆ ಬಂದಿದ್ದೇನೆʼ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ತನ್ನ ಸಾವಿಗೆ ಪಾಲುದಾರರಾದ ಕಿರಣ್ ಕುಮಾರ್, ವೆಂಕಟ್, ಕನಯಂ ಚಕ್ರವರ್ತಿ ಮತ್ತು ಜೆನಂ ಚಕ್ರವರ್ತಿ  ಕಾರಣ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಸೂರ್ಯಪ್ರಕಾಶ್ ತನ್ನ ಮಕ್ಕಳು ಮತ್ತು ಪತ್ನಿಗೆ ಕೀಟನಾಶಕ ಬೆರೆಸಿದ ಕೇಕ್ ನೀಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.  ನಿಝಾಮಾಬಾದ್ ಎಸಿಪಿ ವೆಂಕಟೇಶ್ವರಲು ಹೋಟೆಲ್ ಕೊಠಡಿಗೆ ಭೇಟಿ ನೀಡಿದ್ದಾರೆ. ಸಂಬಂಧಿಕರ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 306ರ ಅಡಿಯಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

Join Whatsapp