ಪಾಟ್ನಾ: ತೇಜಸ್ವಿ ಯಾದವ್ ಅವರ ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ಮತ್ತು ಇತರ ವಿರೋಧ ಪಕ್ಷಗಳನ್ನು ಒಳಗೊಂಡ ಹೊಸ ‘ಮಹಾಮೈತ್ರಿಕೂಟ’ವನ್ನು ಘೋಷಿಸಿದ ನಂತರ ಜನತಾದಳ (ಯುನೈಟೆಡ್) ನಾಯಕ ನಿತೀಶ್ ಕುಮಾರ್ ಬುಧವಾರ ಮಧ್ಯಾಹ್ನ ಮತ್ತೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ನಿತೀಶ್ ಕುಮಾರ್ ಎಂಟನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ತೇಜಸ್ವಿ ಯಾದವ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬೇರೆ ಯಾವ ಶಾಸಕರೂ ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವುದಿಲ್ಲ ಎಂದು ತಿಳಿದುಬಂದಿದೆ.
ನಮ್ಮ ಮಹಾಮೈತ್ರಿಕೂಟದಲ್ಲಿ 164 ಶಾಸಕರು ಮತ್ತು ಸ್ವತಂತ್ರ ಶಾಸಕ ಸೇರಿದಂತೆ ಏಳು ಪಕ್ಷಗಳಿವೆ ಎಂದು ಬಿಹಾರ ರಾಜ್ಯಪಾಲರನ್ನು ಭೇಟಿಯಾದ ನಂತರ ಆರ್ ಜೆಡಿಯ ತೇಜಸ್ವಿ ಯಾದವ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ನಿತೀಶ್ ಕುಮಾರ್ ಹೇಳಿದರು.
ಕುಮಾರ್ ಅವರು ಬಿಜೆಪಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದೊಂದಿಗಿನ ಮೈತ್ರಿಯನ್ನು ಕೊನೆಗೊಳಿಸಿದ್ದು, ಆರ್ ಜೆಡಿಯೊಂದಿಗೆ ಮತ್ತೆ ಕೈಜೋಡಿಸಿದರು.