ಟೊಕಿಯೊ: ಜಪಾನ್ ಮೂಲದ ಆಟೊಮೊಬೈಲ್ ಕಂಪನಿ ನಿಸಾನ್ ಜಾಗತಿಕವಾಗಿ 9 ಸಾವಿರ ಉದ್ಯೋಗ ಕಡಿತ ಮಾಡುವುದಾಗಿ ಹೇಳಿದೆ.
ಮಾರಾಟ ಕುಸಿತದ ಮುನ್ಸೂಚನೆ ಇದ್ದು, ‘ಭವಿಷ್ಯದ ಗಂಭೀರ ಪರಿಸ್ಥಿತಿ’ ಎದುರಿಸುವ ಸಲುವಾಗಿ ಈ ಕ್ರಮ ತೆಗೆದುಕೊಂಡಿರುವುದಾಗಿ ಹೇಳಿದೆ.
ಈ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಕಂಪನಿಯ ನಿವ್ವಳ ಶೇ 93ರಷ್ಟು ಕುಸಿದಿದೆ. ಉತ್ತರ ಅಮೆರಿಕದ ಮಾರುಕಟ್ಟೆಯಲ್ಲಿ ಮಾರಾಟ ಇಳಿಕೆಯಾಗಿದ್ದೆ ಇದಕ್ಕೆ ಕಾರಣ ಎಂದು ಸಿಇಒ ಮಕೊಟೊ ಉಚಿಡಾ ಹೇಳಿದ್ದಾರೆ.
ಚೀನಾ ಸರ್ಕಾರವು ಇ–ವಾಹನಗಳನ್ನು ಉತ್ತೇಜಿಸುತ್ತಿದ್ದು, ಅಲ್ಲಿ ನಿಸಾನ್ ಸೇರಿ ಹಲವು ಆಟೊಮೊಬೈಲ್ ಕಂಪನಿಗಳ ಮಾರುಕಟ್ಟೆ ಕುಸಿತವಾಗಿದೆ.
‘ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದು, ಕಾರ್ಯಕ್ಷಮತೆಯನ್ನು ಹೆಚ್ಚಿಸಲು, ಮಾರುಕಟ್ಟೆಯಲ್ಲಿನ ಬದಲಾವಣೆಗಳಿಗೆ ತ್ವರಿತವಾಗಿ ಹೊಂದಿಕೊಳ್ಳಲು, ವ್ಯವಹಾರದಲ್ಲಿ ಚೇತರಿಕೆ ಕಾಣಲು ತುರ್ತು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ನಿಸಾನ್ ಪ್ರಕಟಣೆಯಲ್ಲಿ ತಿಳಿಸಿದೆ.
‘ನಿಸಾನ್ ತನ್ನ ಜಾಗತಿಕ ಉತ್ಪಾದನಾ ಸಾಮರ್ಥ್ಯವನ್ನು ಶೇ 20ರಷ್ಟು ಕಡಿತಗೊಳಿಸಲಿದೆ. ಜಾಗತಿಕವಾಗಿ 9 ಸಾವಿರ ಉದ್ಯೋಗಿಗಳನ್ನು ವಜಾ ಮಾಡಲಾಗುತ್ತದೆ’ ಎಂದು ಹೇಳಿದೆ.