ಬೆಂಗಳೂರು: ಉರಿ ಗೌಡ, ನಂಜೇಗೌಡ ಎಂಬ ಕಾಲ್ಪನಿಕ ವ್ಯಕ್ತಿಗಳನ್ನು ಮುನ್ನೆಲೆಗೆ ತರುವ ಮೂಲಕ ಒಕ್ಕಲಿಗ ಸಮುದಾಯವನ್ನು ಶತಮಾನಗಳಿಂದಲೂ ಅನ್ಯೋನ್ಯತೆಯಿಂದ ಬದುಕುತ್ತಿರುವ ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುವ ಬಿಜೆಪಿಯ ತಂತ್ರವನ್ನು ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳು ಅರ್ಥ ಮಾಡಿಕೊಂಡು ಅದನ್ನು ವಿಫಲಗೊಳಿಸಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್’ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಬಣ್ಣಿಸಿದ್ದಾರೆ.
ಒಕ್ಕಲಿಗ ಸಮುದಾಯ ಮತ್ತು ಟಿಪ್ಪು ಸುಲ್ತಾನ್ ನಡುವಿನ ಬಾಂಧವ್ಯ ಬಹಳ ಗಟ್ಟಿಯಾದದ್ದು, ಟಿಪ್ಪು ಸುಲ್ತಾನ್ ಅವಧಿಯಲ್ಲಿ ಕೃಷಿಗೆ ಸಾಕಷ್ಟು ಒತ್ತು ನೀಡಿದ್ದರು. ಮೈಸೂರು ಪ್ರಾಂತ್ಯದ ರೈತರು ಇಂದಿಗೂ ಸಮೃದ್ಧ ನೀರಾವರಿಯನ್ನು ಹೊಂದಿರುವುದಕ್ಕೆ ಮೂಲವಾದ ಕನ್ನಂಬಾಡಿ ಕಟ್ಟೆಯನ್ನು ನಿರ್ಮಾಣಕ್ಕೆ ಅಸ್ತಿಭಾರ ಹಾಕಿದವರು ಟಿಪ್ಪು ಸುಲ್ತಾನರೆ ಆಗಿದ್ದರು. ಅದರ ಜೊತೆಗೆ 35,000 ಕೆರೆಗಳನ್ನು ನಿರ್ಮಿಸಿಕೊಟ್ಟಿದ್ದರು. ಭೂ ರಹಿತ ಒಕ್ಕಲಿಗರಿಗೆ ಭೂಮಿಯನ್ನು ಹಂಚಿದ್ದರು. ಈ ಎಲ್ಲವು ಒಕ್ಕಲಿಗ ಸಮುದಾಯ ಮತ್ತು ಟಿಪ್ಪು ಸುಲ್ತಾನ್ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸಿತು. ರೈತರಿಗೆ ಪರ್ಯಾಯ ವಾಣಿಜ್ಯ ಚಟುವಟಿಕೆಗೆ ಅನುಕೂಲವಾಗಲು ರೇಷ್ಮೆಯನ್ನು ಪರಿಚಯಿಸುವ ಮೂಲಕ ಆ ಭಾಗದ ಜನರಿಗೆ ಬಹಳ ದೊಡ್ಡ ಅನುಕೂಲವಾಗುವಂತೆ ಟಿಪ್ಪು ಸುಲ್ತಾನ್ ಶ್ರಮವಹಿಸಿದ್ದರು. ಈ ಎಲ್ಲ ಯೋಜನೆಗಳ ಫಲವನ್ನು 200 ವರ್ಷಗಳಿಂದ ಒಕ್ಕಲಿಗ ಸಮುದಾಯ ಪಡೆಯುತ್ತಲೇ ಇದೆ. ಆ ಕಾರಣಕ್ಕೆ ಟಿಪ್ಪು ಬಗ್ಗೆ ಒಕ್ಕಲಿಗರಲ್ಲಿ ವಿಶೇಷ ಪ್ರೀತಿ ಮತ್ತು ಅಭಿಮಾನ ಇದೆ. ಇಷ್ಟೆಲ್ಲದರ ನಡುವೆ ಕೋಮುವಾದಿ ಬಿಜೆಪಿ ಪಕ್ಷ ಹಿಂದುತ್ವದ ಹೆಸರಿನಲ್ಲಿ ಮತ ಪಡೆಯಲು ಒಕ್ಕಲಿಗ ಸಮುದಾಯವನ್ನು ಟಿಪ್ಪು ಸುಲ್ತಾನ್ ವಿಚಾರದಲ್ಲಿ ಪ್ರಚೋದಿಸಿ ಆ ಮೂಲಕ ಮುಸ್ಲಿಮರ ವಿರುದ್ಧ ನಿಲ್ಲಿಸಲು ಉರಿ ಗೌಡ ಮತ್ತು ನಂಜೇಗೌಡ ಎಂಬ ಕಾಲ್ಪನಿಕ ವ್ಯಕ್ತಿಗಳನ್ನು ಎಳೆದು ತಂದರು. ಅವರು ಟಿಪ್ಪುವನ್ನು ಕೊಂದವರು ಎಂದು ಬಿಂಬಿಸಿ, ಒಕ್ಕಲಿಗರನ್ನು ಬ್ರಿಟಿಷರ ಪರವಾಗಿ ಕೆಲಸ ಮಾಡಿದ ಸಮುದಾಯ ಎಂದು ಅವಮಾನಿಸುವ ಕಾರ್ಯವನ್ನು ಬಿಜೆಪಿ ಮಾಡಲು ಪ್ರಯತ್ನಿಸಿತು ಎಂದು ಮಜೀದ್ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿಯ ಈ ಷಡ್ಯಂತ್ರವನ್ನು ಅರಿತ ಒಕ್ಕಲಿಗ ಸಮುದಾಯ ಅದರ ವಿರುದ್ಧ ಸೆಟೆದು ನಿಂತದ್ದು ಅಭಿನಂದನಾರ್ಹ. ಅದಕ್ಕೆ ಬಲ ತುಂಬುವ ರೀತಿಯಲ್ಲಿ ಒಕ್ಕಲಿಗ ಸಮುದಾಯದ ಶ್ರೀಗಳಾದ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮಿ ಅವರು ತಮ್ಮ ಎಚ್ಚರಿಕೆಯ ಮೂಲಕ ಬಿಜೆಪಿಯ ಒಡೆದಾಳುವ ತಂತ್ರಕ್ಕೆ ತಡೆ ಒಡ್ಡಿದ್ದಾರೆ. ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಅವರ ಈ ಕ್ರಮಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದ ಅಬ್ದುಲ್ ಮಜೀದ್, ಮುಂದಿನ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯ ಬಿಜೆಪಿಯ ಈ ಕುತಂತ್ರಕ್ಕೆ ತಕ್ಕ ಪಾಠ ಕಲಿಸಲಿದೆ ಎಂದು ಹೇಳಿದ್ದಾರೆ.
ಒಕ್ಕಲಿಗರನ್ನು ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುವ ಬಿಜೆಪಿಯ ತಂತ್ರವನ್ನು ವಿಫಲಗೊಳಿಸಿದ ನಿರ್ಮಲಾನಂದ ಶ್ರೀಗಳ ಕ್ರಮ ಸ್ವಾಗತಾರ್ಹ: ಅಬ್ದುಲ್ ಮಜೀದ್ ಮೈಸೂರು
Prasthutha|