►ಕಟೀಲ್ ಸ್ಪರ್ಧೆಗೆ ಪಕ್ಷದೊಳಗೆ ತೀವ್ರ ವಿರೋಧ.. ದ.ಕ ಬಿಜೆಪಿಯಲ್ಲಿ ಭಿನ್ನಮತ, ಬಂಡಾಯ
►ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದುರುಳಿಸಲು ಬಿಜೆಪಿ ಹೈಕಮಾಂಡ್ ಪ್ಲ್ಯಾನ್
ನವದೆಹಲಿ : 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 370 ಕ್ಷೇತ್ರಗಳನ್ನು ಗೆಲ್ಲುತ್ತೆ ಎಂದು ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಬಿಜೆಪಿ ಭದ್ರಕೋಟೆ ಎಂದು ಕರೆಸಿಕೊಳ್ಳುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವೇ ಬಿಜೆಪಿಗೆ ಕಬ್ಬಿಣದ ಕಡಲೆಯಾಗಿದೆ. ಮುಂಬರುವ ಲೋಕಸಭಾ ಚುನಾವಣೆಯ ಸಂಬಂಧ ದಕ್ಷಿಣ ಕನ್ನಡ ಬಿಜೆಪಿ ಪಕ್ಷದಲ್ಲಿ ಭಿನ್ಬಮತ ಹೆಚ್ಚಳ ಆಗುತ್ತಿರುವುದು ಮತ್ತು ಬಂಡಾಯದ ಕೂಗು ಎದ್ದಿರುವುದು ಬಿಜೆಪಿ ನಾಯಕರನ್ನು ಕಂಗೆಡಿಸಿದೆ.
ಒಂದೆಡೆ ನಳೀನ್ ಕುಮಾರ್ ಅವರಿಗೆ ಮತ್ತೊಮ್ಮೆ ಸಂಸತ್ ಟಿಕೆಟ್ ಕೊಡಬೇಡಿ ಎಂಬ ಆಗ್ರಹ ಬಲವಾಗಿದೆ. ಮತ್ತೊಂದೆಡೆ ಬಿಜೆಪಿಗೆ ಬಂಡಾಯದ ಬಿಸಿ ತಾಗಿದ್ದು, ಕಟೀಲ್ ಅವರಿಗೆ ಮತ್ತೊಮ್ಮೆ ಟಿಕೆಟ್ ಕೊಟ್ಟರೆ ಸತ್ಯಜಿತ್ ಸುರತ್ಕಲ್ ಮತ್ತು ಅರುಣ್ ಕುಮಾರ್ ಪುತ್ತಿಲ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ. ಇನ್ನೊಂದೆಡೆ ಇತರೆ ಆಕಾಂಕ್ಷಿಗಳು ಕೂಡ ಬಿಜೆಪಿ ಟಿಕೆಟ್‌ಗಾಗಿ ಲಾಬಿ ಆರಂಭಿಸಿದ್ದಾರೆ. ಹೀಗಾಗಿ ಅಭ್ಯರ್ಥಿ ಆಯ್ಕೆಯಲ್ಲಿ ಸ್ವಲ್ಪ ಏರುಪೇರಾದರೂ ಒಳಯೇಟುಗಳಿಂದ ಕ್ಷೇತ್ರವೇ ಕೈತಪ್ಪುವ ಆತಂಕ ಬಿಜೆಪಿಗೆ ಎದುರಾಗಿದೆ. ತನ್ನ ಭದ್ರಕೋಟೆ ಛಿದ್ರವಾಗುವ ಭೀತಿ ಬಿಜೆಪಿಯಲ್ಲಿದೆ.
ಇದೆಲ್ಲದರ ಬಗ್ಗೆ ಚಿಂತೆ ಮಾಡಿರುವ ಬಿಜೆಪಿ ಹೈಕಮಾಂಡ್ ದಕ್ಷಿಣ ಕನ್ನಡ ಬಿಜೆಪಿಯೊಳಗಿನ ಭಿನ್ನಮತ ಶಮನ ಮಾಡಲು ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆಯುವ ಪ್ರಯತ್ನ ಮಾಡಿದೆ ಎಂಬ ಸುದ್ದಿ ಇದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ತದಿಂದ ಕಣಕ್ಕಿಳಿಸಲು ಬಿಜೆಪಿ ಹೈಕಮಾಂಡ್ ಚಿಂತನೆ ಮಾಡಿದೆ ಎಂದು ತಿಳಿದುಬಂದಿದೆ.
ನಿರ್ಮಲಾ ಸೀತಾರಾಮನ್ ಅವರನ್ನು ಕ್ಷೇತ್ರಕ್ಕೆ ಕರೆತಂದರೆ ಪಕ್ಷದೊಳಗಿನ ಭಿನ್ನಮತ ಮತ್ತು ಬಂಡಾಯವನ್ನು ದೂರ ಮಾಡಬಹುದು ಎಂಬ ಯೋಚನೆ ಮಾಡಿರುವ ಬಿಜೆಪಿ ಹೈಕಮಾಂಡ್, ದಕ್ಷಿಣ ಕನ್ನಡ ಲೋಕಸಭೆಯ ಬಿಜೆಪಿ ಅಭ್ಯರ್ಥಿಯಾಗಿ ನಿರ್ಮಲಾ ಅವರನ್ನು ಆಯ್ಕೆ ಮಾಡಲು ಮುಂದಾಗಿದೆ ಎನ್ನಲಾಗುತ್ತಿದೆ.
ನಳಿನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ನಿರಾಕರಿಸಿದರೆ ಜಿಲ್ಲಾ ಬಿಜೆಪಿಯ ಭಿನ್ನಮತ ಬಹುತೇಕ ಶಮನಗೊಳ್ಳಲಿದೆ ಎಂಬ ವಿಶ್ವಾಸ ಬಿಜೆಪಿಯಲ್ಲಿದೆ. ನಿರ್ಮಲಾ ಸೀತಾರಾಮನ್ ಅಭ್ಯರ್ಥಿಯಾದರೆ ಯಾರ ವಿರೋಧವೂ ಇರಲ್ಲ, ಮೋದಿಯವರ ಆಪ್ತರಾಗಿರುವ ಕೇಂದ್ರದ ಪ್ರಭಾವಿ ಮಂತ್ರಿಯ ಗೆಲುವಿಗೆ ಎಲ್ಲರೂ ಭಿನ್ನಮತ ಮರೆತು ಒಗ್ಗಟ್ಟಾಗಿ ಕೆಲಸ ಮಾಡಲಿದ್ದಾರೆ ಎಂಬ ನಿರೀಕ್ಷೆ ಬಿಜೆಪಿಯಲ್ಲಿದೆ.
ನಿರ್ಮಲಾ ಸೀತಾರಾಮನ್ ಅವರು ದಕ್ಷಿಣ ಕನ್ನಡದಿಂದ ಲೋಕಸಭೆಗೆ ಆಯ್ಕೆಯಾದರೆ ಅವರಿಂದ ತೆರವಾಗುವ ಒಂದು ರಾಜ್ಯಸಭೆಯ ಸ್ಥಾನವನ್ನು ಹೊಸಬರಿಗೆ ನೀಡಲು ಅವಕಾಶ ಒದಗಿ ಬರುತ್ತದೆ. ನಿರ್ಮಲಾ ಅವರನ್ನು ಲೋಕಸಭೆಗೆ ಆರಿಸಿ, ಪಕ್ಷದ ಕಾರ್ಯಕರ್ತರೊಬ್ಬರನ್ನು ರಾಜ್ಯಸಭೆಗೆ ಕಳಿಸಲು ಬಿಜೆಪಿ ಹೈಕಮಾಂಡ್ ಚಿಂತನೆ ಮಾಡಿದೆ ಎನ್ನಲಾಗುತ್ತಿದೆ.