ಒಂದೇ ವೇದಿಕೆಯಲ್ಲಿ ನಿಖಿಲ್ – ಪ್ರಜ್ವಲ್: ಜೆಡಿಎಸ್ ಬಲಪಡಿಸಲು ಕಾರ್ಯತಂತ್ರ

Prasthutha|

ಬೆಂಗಳೂರು: ನಾಲ್ಕು ದಿನಗಳಿಂದ ಬಿಡದಿ ತೋಟದಲ್ಲಿ ನಡೆದ ಜನತಾ ಪರ್ವ 1.O ಹಾಗೂ ಮಿಷನ್ 123 ಕಾರ್ಯಾಗಾರದಲ್ಲಿ ಇಂದು ಜನತಾದಳದ ಯುವ ಪರಿವಾರವನ್ನು ಕುರಿತು ಯುವ ಜನತಾದಳದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಜೋಡಿ ಮಾತನಾಡಿತು.


ಇಬ್ಬರು ಯುವ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಾಗ ಸುಮಾರು 500ಕ್ಕೂ ಹೆಚ್ಚು ಯುವ ಪ್ರತಿನಿಧಿಗಳು ಖುಷಿಯಿಂದ ಕೇಕೆ ಹಾಕಿದರು.
ತಮ್ಮಿಬ್ಬರ ನಡುವೆ ಭಿನಮತ ಇದೆ ಎಂದು ಬಿಂಬಿಸಿದ್ದವರಿಗೆ ಉತ್ತರ ಕೊಟ್ಟ ಅವರಿಬ್ಬರೂ, ಕುಟುಂಬದಲ್ಲಿಯೂ ನಾವು ಒಂದೇ. ಪಕ್ಷದಲ್ಲಿ ಕೂಡ ಒಂದೇ. ನಮ್ಮನ್ನು ಬೇರೆ ಮಾಡಲು ಯಾರಿಗೂ ಸಾಧ್ಯವಿಲ್ಲ ಎಂದು ಘೋಷಿಸಿದರು.
ಕಾರ್ಯಾಗಾರದಲ್ಲಿ ಮೊದಲು ಮಾತನಾಡಿದ ಪ್ರಜ್ವಲ್ ರೇವಣ್ಣ ಅವರು, ಅಣ್ಣ ತಮ್ಮಂದಿರಾಗಿ ನಾವು ಯಾವತ್ತಿಗೂ ಒಂದೇ. ರಾಜ್ಯದಲ್ಲಿ ಪಕ್ಷ ಕಟ್ಟಲು ನಾವಿಬ್ಬರು ಒಂದಾಗಿ ಇದ್ದೇವೆ. ಕುಮಾರಣ್ಣ ಅವರನ್ನು ಮತ್ತೆ ಸಿಎಂ ಮಾಡಲು ನಾವು ಇಬ್ಬರು ಯಾವಾಗಲೂ ಒಂದಾಗಿ ಇರುತ್ತೇವೆ, ಪಕ್ಷದ ಕೆಲಸ ಮಾಡುತ್ತೇವೆ. ಈ ಬಗ್ಗೆ ಯಾರಿಗೂ ಅನುಮಾನ ಬೇಡ ಎಂದರು.
ಇಬ್ಬರು ಧರ್ಮಸ್ಥಳ ಹಾಗೂ ಚಾಮುಂಡಿ ಬೆಟ್ಟಕ್ಕೆ ಹೋಗುತ್ತೇವೆ. ಮೈಸೂರಿಗೆ ಮೊದಲು ಹೋಗಿ ತಾಯಿ ಚಾಮುಂಡೇಶ್ವರಿ ಅಮ್ಮನ ಆಶೀರ್ವಾದ ಪಡೆದು ಕಾರ್ಯಕ್ರಮ ಮಾಡುತ್ತೇವೆ. ಅಲ್ಲಿಂದಲೇ ಯುವಕರನ್ನು ಒಟ್ಟುಗೂಡಿಸುತ್ತೇವೆ ಎಂದ ಪ್ರಜ್ವಲ್ ಅವರು, ಇವತ್ತು ನಮ್ಮಿಬ್ಬರನ್ನು ನೋಡಿ ಕುಮಾರಣ್ಣಗೆ ಬಹಳ ಸಂತೋಷವಾಗಿದೆ ಎಂದರು.
ತದ ನಂತರ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು, ಪ್ರಜ್ವಲ್ ನನ್ನ ತಮ್ಮ. ಒಂದೇ ವೇದಿಕೆಯಲ್ಲಿ ಕಾಣಿಸಲ್ಲ ಅಂತಿದ್ದರು. ಇವತ್ತು ಜತೆಯಲ್ಲಿದ್ದೇವೆ. ಯಾವತ್ತೂ ಇರುತ್ತೇವೆ. ಅನುಮಾನವೇ ಬೇಡ. ಇವತ್ತು ನಾವು ಬೇರೆ ಬೇರೆ ಎಂದು ಬಿಂಬಿಸಿದ್ದವರಿಗೆ ಉತ್ತರ ಸಿಕ್ಕಿದೆ ಎಂದು ಭಾವಿಸಿದ್ದೇನೆ ಎಂದರು.

- Advertisement -

2023 ನಮ್ಮದೇ. ಸಂಕಲ್ಪ ಬಲದಿಂದ ಮುಂದೆ ಹೋಗೋಣ. ನಮ್ಮ ಪಕ್ಷದ ಸರಕಾರ ಬರಲು ಎಲ್ಲಾ ಶ್ರಮವನ್ನು ಹಾಕೋಣ. ನಾನು ಮತ್ತು ಪ್ರಜ್ವಲ್ ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತೇವೆ ಎಂದು ನಿಖಿಲ್ ಅವರು ಹೇಳಿದರು.

Join Whatsapp