ಚನ್ನಪಟ್ಟಣ: ಉಪ ಚುನಾವಣೆಯ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಜೆಡಿಎಸ್ ನಿಂದ ನಿಖಿಲ್ ಕುಮಾರಸ್ವಾಮಿ ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ನಡೆದ ರೋಡ್ ಶೋ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ, ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಚುನಾವಣಾ ಅಧಿಕಾರಿಗಳು ಆಯೋಜಕರಿಗೆ ನೋಟಿಸ್ ನೀಡಿದ್ದಾರೆ.
ರೋಡ್ ಶೋ ಕಾರ್ಯಕ್ರಮಕ್ಕೆ ವಿವಿಧ ಭಾಗಗಳಿಂದ ಸುಮಾರು ಖಾಸಗಿ 96 ಬಸ್ ಗಳಲ್ಲಿ ಜನರನ್ನು ಕರೆತರಲಾಗಿತ್ತು. ಈ ಕುರಿತು ಪರಿಶೀಲನೆ ನಡೆಸಿದಾಗ ಬಸ್ ಗಳಿಗೆ ಅನುಮತಿ ಪಡೆಯದಿರುವುದು ಕಂಡುಬಂತು. ಹಾಗಾಗಿ, ಆಯೋಜಕರು ಹಾಗೂ ಬಸ್ ಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನೀತಿ ಸಂಹಿತೆ ಉಲ್ಲಂಘನೆ ಕುರಿತು ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಯಲ್ಲಿ ಎನ್ ಸಿಆರ್ ಕೂಡ ಮಾಡಿಕೊಳ್ಳಲಾಗಿದೆ. ಇಂದು ನ್ಯಾಯಾಲಯದ ಅನುಮತಿ ಪಡೆದು, ಸಂಬಂಧಪಟ್ಟವರ ಮೇಲೆ ಪ್ರಕರಣ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.