ಬೆಂಗಳೂರು: ಮಾದಕ ವಸ್ತು ಸೇವನೆ ಹಾಗೂ ಮಾರಾಟದ ವಿರುದ್ಧ ಸಮರ ಸಾರಿರುವ ಸಿಸಿಬಿ ಪೊಲೀಸರು ಭರ್ಜರಿ ಬೇಟೆಯಾಡಿ ನೈಜೀರಿಯಾ ಡ್ರಗ್ ಪೆಡ್ಲರ್ ನನ್ನು ಬಂಧಿಸಿ 1 ಕೋಟಿ ರೂ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿ ಕೊಂಡಿದ್ದಾರೆ.
ಕಮ್ಮನಹಳ್ಳಿಯ ಸೆಂಟ್ ಥಾಮಸ್ ಟೌನ್ ನ 3ನೇ ಕ್ರಾಸ್ನ, ಕಾನ್ವೆಂಟ್ ಅಡ್ಡ ರಸ್ತೆಯ ಮನೆಯೊಂದರಲ್ಲಿ ಬಾಡಿಗೆಗಿದ್ದ ನೈಜೀರಿಯಾ ಪ್ರಜೆ ಫಿಲಿಪ್ಸ್ ಬಂಧಿತ ಆರೋಪಿಯಾಗಿದ್ದಾನೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್
ತಿಳಿಸಿದ್ದಾರೆ.
ಬಂಧಿತನಿಂದ 500 ಗ್ರಾಂ ಎಂಡಿಎಂಎ, 400 ಗ್ರಾಂ ಎಕ್ಸ್ ಟಸಿ ಟ್ಯಾಬ್ಲೆಟ್ ಮೊಬೈಲ್ ತೂಕದ ಯಂತ್ರ ಸೇರಿ ಒಂದು ಕೋಟಿ ರೂ ಮೌಲ್ಯದ ಮಾದಕ ವಸ್ತು ವಶಕ್ಕೆ ಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದರು.
ಆರೋಪಿಯು ಪ್ರವಾಸಿ ವೀಸಾದಡಿ ಭಾರತಕ್ಕೆ ಬಂದು ಪಾಸ್ ಪೋರ್ಟ್, ವೀಸಾ ನಿಯಮಗಳನ್ನು ಉಲ್ಲಂಘಿಸಿ ಮಾದಕ ವಸ್ತುಗಳನ್ನು ಮಾರಾಟ ಜಾಲದಲ್ಲಿ ಸಕ್ರಿಯವಾಗಿ ತೊಡಗಿದ್ದ. ಮುಂಬೈನಲ್ಲಿ ವಾಸವಾಗಿರುವ ನೈಜೀರಿಯಾ ಮೂಲದ ಸ್ನೇಹಿತನಿಂದ ಕಡಿಮೆ ಬೆಲೆಗೆ ಮಾದಕ ವಸ್ತುಗಳನ್ನು ಖರೀದಿಸಿ ತಂದು ಹೆಚ್ಚಿನ ಬೆಲೆಗೆ ನಗರದ ಕಾಲೇಜು ವಿದ್ಯಾರ್ಥಿಗಳು ಹಾಗೂ ಐಟಿ,ಬಿಟಿ ಉದ್ಯೋಗಿಗಳಿಗೆ ಎಂ.ಡಿ.ಎಂ.ಎ ಕ್ರಿಸ್ಟೆಲ್ ಎಕ್ಸ್ಟೆಸಿ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದ.
ಖಚಿತವಾದ ಮಾಹಿತಿಯನ್ನು ಆಧರಿಸಿ ಎಸಿಪಿ ಕೆ.ಸಿ.ಗೌತಮ್,ಇನ್ಸ್ಪೆಕ್ಟರ್ ವಿರೂಪಾಕ್ಷಸ್ವಾಮಿ ಮತ್ತವರ ತಂಡ ಆರೋಪಿಯ ಮನೆಯ ಮೇಲೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.
ವಿಚಾರಣೆಯಲ್ಲಿ ಆರೋಪಿಯ ವಿರುದ್ಧ ಮುಂಬೈನ ಸಾಂತಾಕ್ರೂಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ತಿಳಿದು ಬಂದಿದೆ ಎಂದರು.