ನವದೆಹಲಿ : ಜನಪ್ರಿಯ ಟಿವಿ ಪತ್ರಕರ್ತೆ ನಿಧಿ ರಝ್ದಾನ್ ಅವರಿಗೇ ಉದ್ಯೋಗದ ನೆಪದಲ್ಲಿ ಮಾಹಿತಿಗೆ ಕನ್ನ ಹಾಕುವ ಯತ್ನ ನಡೆದಿದೆ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ.
ಆರು ತಿಂಗಳ ಹಿಂದೆ ‘ಎನ್ ಡಿಟಿವಿ’ ನಿರೂಪಕಿ ನಿಧಿ ರಝ್ದಾನ್, ತಾವು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕಿ ಹುದ್ದೆಗಾಗಿ ಟಿವಿ ವಾಹಿನಿ ತೊರೆಯುವುದಾಗಿ ತಿಳಿಸಿದ್ದರು. ಆದರೆ, ಇದೀಗ ತನ್ನ ಮಾಹಿತಿಗೆ ಕನ್ನ ಹಾಕಲು ನಡೆದಿರುವ ಇದೊಂದು ವಂಚನೆ ಜಾಲ ಎಂಬುದಾಗಿ ಅವರು ತಿಳಿಸಿದ್ದಾರೆ.
ಕಳೆದ ಸೆಪ್ಟಂಬರ್ ನಲ್ಲಿ ತಾನು ಹೊಸ ಉದ್ಯೋಗಕ್ಕಾಗಿ ಸಿದ್ಧಳಾಗಿದ್ದೆ. ಆದರೆ, ಕೊರೊನ ಹಿನ್ನೆಲೆಯಲ್ಲಿ 2021 ಜನವರಿಯಿಂದ ತರಗತಿಗಳು ಆರಂಭಗೊಳ್ಳಲಿವೆ ಎಂದು ಹೇಳಲಾಗಿತ್ತು. ಆದರೆ, ಇತ್ತೀಚೆಗೆ ತಮ್ಮ ಜೊತೆ ಸಂವಹನ ನಡೆಸಿದವರ ಕೆಲವೊಂದು ವ್ಯವಹಾರಗಳಿಂದ ಸಂಶಯ ಬಂದು ಹಾರ್ವರ್ಡ್ ವಿವಿಯ ಉನ್ನತ ಅಧಿಕಾರಿಗಳನ್ನು ನೇರವಾಗಿ ಸಂಪರ್ಕಿಸಿದಾಗ, ತನ್ನನ್ನು ವಂಚಿಸಲು ಯತ್ನಿಸಿರುವುದು ಬೆಳಕಿಗೆ ಬಂದಿದೆ ಎಂದು ನಿಧಿ ಹೇಳಿದ್ದಾರೆ.
ಹಾರ್ವರ್ಡ್ ವಿವಿಯ ಕಡೆಯವರೆಂದು ನಂಬಿ ತಾನು ಕೆಲವೊಂದು ಮಾಹಿತಿಗಳನ್ನು ಹಂಚಿಕೊಂಡಿದ್ದೆ. ಈ ಮಾಹಿತಿಗಳನ್ನು ಆಧರಿಸಿ, ದುಷ್ಕರ್ಮಿಗಳು ತಮ್ಮ ಇ-ಮೇಲ್, ಸೋಶಿಯಲ್ ಮೀಡಿಯಾ ಖಾತೆಗಳ ಮಾಹಿತಿ ಸಂಗ್ರಹಿಸಿರುವ ಸಾಧ್ಯತೆಯಿದೆ ಎಂದು ನಿಧಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಪೊಲೀಸ್ ದೂರು ದಾಖಲಿಸಿ, ಅಪರಾಧಿಗಳನ್ನು ಪತ್ತೆ ಹಚ್ಚುವಂತೆ ಮನವಿ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ.