ಅಂಬಾನಿ ಮನೆ ಬಳಿ ಸ್ಪೋಟಕ ಪತ್ತೆ ಪ್ರಕರಣ | ಮಾಜಿ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮಾ ನಿವಾಸದ ಮೇಲೆ NIA ದಾಳಿ

Prasthutha|

ಮುಂಬೈ : ಅಂಬಾನಿ ನಿವಾಸ ಅಂಟಿಲೀಯಾ ಬಳಿ ಸ್ಪೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಮಾಜಿ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮಾ ಅವರ ನಿವಾಸದ ಮೇಲೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.

- Advertisement -

NIA ತಂಡವು ಮುಂಬೈನ ಅಂಧೇರಿ (ಪೂರ್ವ) ಪ್ರದೇಶದ ಪ್ರದೀಪ ಶರ್ಮಾ ಅವರ ನಿವಾಸಕ್ಕೆ ದಾಳಿ ನಡೆಸಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಅಧಿಕಾರಿಗಳು ಶೋಧ ನಡೆಸುತ್ತಿದ್ದಾಗ ಶರ್ಮಾ ಅವರ ಮನೆಯೊಳಗೆ ಇದ್ದರು ಎನ್ನಲಾಗಿದೆ.

ದಾಳಿ ಹಿನ್ನೆಲೆಯಲ್ಲಿ ಶರ್ಮಾ ಅವರ ನಿವಾಸವಿರುವ ಇಡೀ ರಸ್ತೆಯನ್ನು ಬಂದ್ ಮಾಡಿ, ಸುತ್ತಮುತ್ತ CRPF ಯೋಧರನ್ನು ನಿಯೋಜನೆ ಮಾಡಲಾಗಿದೆ.ಕೆಲ ದಿನಗಳ ಮುನ್ನ NIA ಅಧಿಕಾರಿಗಳು ಶರ್ಮ ಅವರನ್ನು ದಕ್ಷಿಣ ಮುಂಬೈನಲ್ಲಿರುವ ಅವರ ಕಚೇರಿಯಲ್ಲಿ ವಿಚಾರಣೆ ನಡೆಸಿದ್ದರು.

- Advertisement -

ಎನ್ ಕೌಂಟರ್ ಸ್ಪೆಷಲಿಸ್ಟ್ ಎಂದು ಕರೆಯಲ್ಪಡುವ ಪ್ರದೀಪ ಶರ್ಮಾ ಅವರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ NIA ಅಧಿಕಾರಿಗಳು ಈ ಹಿಂದೆ ಎರಡು ಬಾರಿ ಪ್ರಶ್ನಿಸಿದ್ದರು. ಅವರು ಮುಂಬೈ ಮಾಜಿ ಪೊಲೀಸ್ ಸಚಿನ್ ವಾಜ್ ಅವರ ನಿಕಟವರ್ತಿಯಾಗಿದ್ದರು ಎಂದು ತಿಳಿದುಬಂದಿದೆ.

ಪ್ರದೀಪ ಶರ್ಮಾ 1983 ರಲ್ಲಿ ಮುಂಬೈ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿ ಸೇರಿಕೊಂಡು ಮುಂಬೈ ಭೂಗತ ಜಗತ್ತಿಗೆ ಸಂಬಂಧಿಸಿದ 300 ಕ್ಕೂ ಹೆಚ್ಚು ಎನ್ ಕೌಂಟರ್ ಗಳಲ್ಲಿ ಭಾಗಿಯಾಗಿದ್ದಾರೆ, ಅವುಗಳಲ್ಲಿ 113 ಶೂಟೌಟ್ ಗಳು ಅವರ ಹೆಸರಿನಲ್ಲಿವೆ.

2019ರಲ್ಲಿ ಸ್ವಯಂ ನಿವೃತ್ತಿ ಪಡೆದು ಶಿವಸೇನೆ ಸೇರಿದ್ದರು. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅವರು ನಾಲಾ ಸೋಪಾರಾ ಸ್ಥಾನದಿಂದ ಶಿವಸೇನೆ ಟಿಕೆಟ್ ನಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದರು.

Join Whatsapp