ದೇಶದ ಸಂವಿಧಾನ ರಕ್ಷಣೆಗೆ ಪ್ರತಿಯೊಬ್ಬ ಭಾರತೀಯನೂ ತ್ಯಾಗ, ಬಲಿದಾನಕ್ಕೆ ಸಿದ್ಧರಾಗಬೇಕು: ಮುಹಮ್ಮದ್ ಶಾಕಿಫ್

Prasthutha|

“ಕರ್ನಾಟಕವನ್ನು ಫ್ಯಾಶಿಸ್ಟರಿಂದ ರಕ್ಷಿಸೋಣ” ಅಭಿಯಾನದ ಸಮಾರೋಪ ಸಮಾರಂಭ

- Advertisement -

ಮಂಗಳೂರು: ದೇಶ ಮತ್ತು ದೇಶದ ಸಂವಿಧಾನವನ್ನು ರಕ್ಷಿಸಲು ಹಾಗೂ ಫ್ಯಾಶಿಸ್ಟ್ ಶಕ್ತಿಯನ್ನು ನಿರ್ಮೂಲನೆ ಮಾಡಲು ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ತ್ಯಾಗ, ಬಲಿದಾನಕ್ಕೆ ಪ್ರತಿಯೊಬ್ಬ ಭಾರತೀಯನೂ ಸಿದ್ಧನಾಗಿರಬೇಕು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯದರ್ಶಿ ಮುಹಮ್ಮದ್ ಶಾಕಿಫ್ ಕರೆ ನೀಡಿದ್ದಾರೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಂಗಳೂರಿನ ಹೊರವಲಯದ ಕಲ್ಲಾಪುವಿನ ಯೂನಿಟಿ ಹಾಲ್ ನ ಮೈದಾನದಲ್ಲಿ  ಶುಕ್ರವಾರ ಹಮ್ಮಿಕೊಂಡಿದ್ದ  “ಕರ್ನಾಟಕವನ್ನು ಫ್ಯಾಶಿಸ್ಟರಿಂದ ರಕ್ಷಿಸೋಣ” ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ಸಂಘಪರಿವಾರ ದೇಶದ ಮುಗ್ಧ ಹಿಂದೂಗಳನ್ನು ಅಂಧ ಭಕ್ತರನ್ನಾಗಿ ಮಾಡಿ, ಅವರ ತಲೆಯಲ್ಲಿ ವಿಷ ತುಂಬುತ್ತಿದೆ. ಅವರನ್ನು ತಮಗೆ ಬೇಕಾದಂತೆ ಆಡಿಸುತ್ತಿದೆ. ಚುನಾವಣೆ ಬಂದಾಗ ನಿರುದ್ಯೋಗ, ಬೆಲೆ ಏರಿಕೆ, ಅಭಿವೃದ್ಧಿ ಬಗ್ಗೆ ಪ್ರಶ್ನಿಸಿದರೆ, ಅವರು ಲವ್ ಜಿಹಾದ್, ಮತಾಂತರ ನಿಷೇಧ ಕಾಯ್ದೆ ಮುಂತಾದ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟು ಜನರ ದಾರಿ ತಪ್ಪಿಸುತ್ತಿದ್ದಾರೆ. ಹಿಂದೂ ಅಪಾಯದಲ್ಲಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸಿ ಹಿಂದೂಗಳ ಧ್ರುವೀಕರಣವನ್ನು ಮಾಡಲಾಗುತ್ತಿದೆ. ಹಿಂದೂ ಧರ್ಮ ಬ್ರಿಟಿಷರು, ಮೊಗಲರು ಇದ್ದಾಗಲೂ ಅಸ್ತಿತ್ವದಲ್ಲಿತ್ತು. ಈಗಲೂ ಅಸ್ತಿತ್ವದಲ್ಲಿದೆ. ಈ ಧರ್ಮಕ್ಕೆ ಯಾವುದೇ ಅಪಾಯವಿಲ್ಲ. ವಾಸ್ತವದಲ್ಲಿ ಅಪಾಯದಲ್ಲಿರುವುದು ಆರೆಸ್ಸೆಸ್ ಆಗಿದೆ ಎಂದು ಹೇಳಿದರು.

- Advertisement -

ಪಾಪ್ಯುಲರ್ ಫ್ರಂಟ್ ಇರುವವರೆಗೆ ನಿರಂತರವಾಗಿ ಆರೆಸ್ಸೆಸ್ ವಿರುದ್ಧ ಹೋರಾಟ ನಡೆಸಲಿದೆ. ಯಾವುದೇ ವಿಷಪೂರಿತ ವಿದೇಶಿ ಚಿಂತನೆಯನ್ನು ಭಾರತದಲ್ಲಿ ಅನುಷ್ಠಾನಗೊಳಿಸಲು ಅವಕಾಶ ನೀಡುವುದಿಲ್ಲ. ಸಂವಿಧಾನ ಅತಿದೊಡ್ಡ ಅಸ್ತ್ರ, ಅದರ ಮೂಲಕವೇ ನಾವು ನಿಮಗೆ ಪಾಠ ಕಲಿಸುತ್ತೇವೆ. ಪ್ರಜಾಪ್ರಭುತ್ವ ಮಾದರಿಯಲ್ಲಿ ಪ್ರತಿಭಟನೆ ನಡೆಸುವವರನ್ನು ದೇಶದ್ರೋಹಿಗಳೆಂದು ಬಿಂಬಿಸಲಾಗುತ್ತಿದೆ. ಇದೇ ವೇಳೆ ಅಲ್ಪಸಂಖ್ಯಾತರ ಮೇಲೆ ಹಲ್ಲೆ ನಡೆಸುವವರನ್ನು ದೇಶಪ್ರೇಮಿಗಳೆಂದು ಪರಿಗಣಿಸಲಾಗುತ್ತಿದೆ. ಪ್ರತಿಭಟನೆ ಎಂಬುದು ಅಂಬೇಡ್ಕರ್, ಗಾಂಧಿ ತೋರಿಸಿಕೊಟ್ಟ ಮಾದರಿಗಳಾಗಿದ್ದು, ಅವರ ಮೂಲಕವೇ ನಾವು ಹೋರಾಟ ನಡೆಸುತ್ತೇವೆ ಎಂದು ಶಾಕಿಫ್ ಹೇಳಿದರು.

ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ದೇಶದ ಹಿಂದೂ-ಮುಸ್ಲಿಮರ ಡಿಎನ್ ಎ ಒಂದೇ ಆಗಿದೆ ಎಂದು ಹೇಳಿಕೆ ನೀಡುತ್ತಾರೆ. ಆದರೆ ನಮ್ಮ ಡಿಎನ್ ಎ ನ್ಯಾಯದ ಪರವಾಗಿದೆ. ನ್ಯಾಯ, ಸಂವಿಧಾನಬದ್ಧವಾಗಿರುವ ಯಾರೊಂದಿಗೂ ನಾವು ಜೀವಿಸಲು ತಯಾರಿದ್ದೇವೆ. ಆದರೆ ಅನ್ಯಾಯ, ಅಕ್ರಮವೆಸಗುವವರ ವಿರುದ್ಧ ಯಾವತ್ತೂ ಹೋರಾಟ ನಡೆಸುತ್ತಲೇ ಇರುತ್ತೇವೆ ಎಂದು ಹೇಳಿದರು.

ಜನಪರ ಹೋರಾಟದಲ್ಲಿ ತ್ಯಾಗ, ಬಲಿದಾನಗಳನ್ನು ಮಾಡಿದವರನ್ನು ನಾವು ಮರೆಯಬಾರದು. ಸಿಎಎ, ಎನ್ಆರ್ ಸಿ ಹೋರಾಟಗಳಲ್ಲಿ ಭಾಗವಹಿಸಿ ನಮ್ಮ ಪರ ಧ್ವನಿ ಎತ್ತಿದ ಶಾರ್ಜೀಲ್ ಉಸ್ಮಾನಿ ಸೇರಿದಂತೆ ಅನೇಕ ಯುವಕರು ಇಂದು ಕೂಡ ಜೈಲಿನಲ್ಲಿದ್ದಾರೆ. ಅವರನ್ನು ನಾವು ಪ್ರತಿನಿತ್ಯ ನೆನಪಿಸಬೇಕು. ಕೃಷಿ ಕಾಯ್ದೆ ವಿರುದ್ಧ ಹೋರಾಡಿ ಮಡಿದ ರೈತರನ್ನೂ ನಾವು ಸ್ಮರಿಸಬೇಕು. ಆದರೆ ಸ್ವಯಂ ಘೋಷಿತ ನಾಯಕರು ಇವರ ಬಗ್ಗೆ ಚಕಾರವೆತ್ತುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಸವಣ್ಣನ ಅನುಯಾಯಿಯೆ ಅಥವಾ ಆರೆಸ್ಸೆಸ್ ನ ಗೋಡ್ಸೆ ಸಂತತಿಯೇ ಎಂಬುದನ್ನು ಸ್ಪಷ್ಟಪಡಿಸಿ. ಲಿಂಗಾಯತ ಮತಗಳಿಗಾಗಿ ನಿಮ್ಮನ್ನು ಆರೆಸ್ಸೆಸ್ ಬಳಸಿಕೊಳ್ಳುತ್ತಿದೆ ಎಂಬುದನ್ನು ನೀವು ಅರಿಯಿರಿ ಎಂದು ಹೇಳಿದರು.

ಪಿ.ಎಫ್.ಐ ರಾಜ್ಯ ಉಪಾಧ್ಯಕ್ಷ ಅಯ್ಯೂಬ್ ಅಗ್ನಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಫ್ಯಾಶಿಸಂನಿಂದ ಸಮಾಜದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜನರಿಗೆ ತಿಳಿಸಿಕೊಡುವ ಉದ್ದೇಶದಿಂದ ಪಾಪ್ಯುಲರ್ ಫ್ರಂಟ್ ರಾಜ್ಯಾದ್ಯಂತ ಕರ್ನಾಟಕವನ್ನು ಫ್ಯಾಶಿಸ್ಟರಿಂದ ರಕ್ಷಿಸಿ ಎಂಬ ಅಭಿಯಾನವನ್ನು ಹಮ್ಮಿಕೊಂಡಿದೆ ಎಂದರು.

ಸಂಘಪರಿವಾರ, ವಿದ್ಯಾರ್ಥಿಗಳ ಮೂಲಕ ಸಮಾಜದಲ್ಲಿ ವಿಷ ಬಿತ್ತುವ ಕಾರ್ಯ ನಡೆಸುತ್ತಿದೆ. ಕ್ರೈಸ್ತರು ನಡೆಸುವ ಪ್ರಾರ್ಥನಾ ಸಭೆಗೆ ನುಗ್ಗಿ ದಾಂಧಲೆ ನಡೆಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಆಯುಧ ಪೂಜೆಯ ಹೆಸರಿನಲ್ಲಿ ಶಸ್ತ್ರಾಸ್ತ್ರಗಳನ್ನು ಬಹಿರಂಗವಾಗಿ ಪ್ರದರ್ಶಿಸುತ್ತಾ ಅರಾಜಕತೆ ಸೃಷ್ಟಿಸಲು ಸಂಘಪರಿವಾರ ಪ್ರಯತ್ನಿಸುತ್ತಿದೆ. ಆದರೆ ಸರ್ಕಾರ ಮತ್ತು ಪೊಲೀಸ್ ಇಲಾಖೆ ಜಾಣ ಮೌನಕ್ಕೆ ಶರಣಾಗಿದೆ ಎಂದು ಆರೋಪಿಸಿದರು.

‘ಕಡೆಗಣಿಸಿದ ಕಿಡಿಯೊಂದು ಇಡೀ ಮನೆಯನ್ನೇ ಸುಟ್ಟಂತೆ’ ಎಂಬ ಮಾತಿನಂತೆ, ಸಂಘಪರಿವಾರದ ದ್ವೇಷ ಇಡೀ ಸಮಾಜವನ್ನು ಸುಡುತ್ತಿದೆ. ಇದನ್ನು ನಿಯಂತ್ರಿಸಲು ಪಾಪ್ಯುಲರ್ ಫ್ರಂಟ್ ಸಿದ್ಧವಾಗಿದೆ ಎಂದು ಹೇಳಿದ ಅವರು, ಸ್ವಾತಂತ್ರ್ಯ ಸಂಗ್ರಾಮ, ಸಿಎಎ ಹೋರಾಟ ಮತ್ತು ರೈತರ ಹೋರಾಟದಿಂದ ನಮಗೆ ಪಾಠವಿದೆ. ಒಗ್ಗಟ್ಟಿನಿಂದ ನಡೆಸುವ ಯಾವುದೇ ಹೋರಾಟಕ್ಕೂ ಜಯ ದೊರಕಲಿದೆ ಎಂಬುದು ಈ ಮೂರೂ ಹೋರಾಟಗಳಿಂದ ಸಾಬೀತಾಗಿದೆ ಎಂದು ಅವರು ಹೇಳಿದರು.

ಕೇರಳ ರಾಜ್ಯ ಉಪಾಧ್ಯಕ್ಷ ಮೌಲಾನಾ ಅಬ್ದುಲ್ ಮಜೀದ್ ಖಾಸಿಮಿ ಮಾತನಾಡಿ, ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರಕ್ಕೆ ಬಂದ ಮೇಲೆ 70ಕ್ಕೂ ಹೆಚ್ಚು ಕೋಮು ದಾಳಿಗಳು ನಡೆದಿವೆ. ಫ್ಯಾಶಿಸ್ಟ್ ನ ಕಬಂಧಬಾಹುಗಳಿಂದ ಉಸಿರುಗಟ್ಟುತ್ತಿರುವ ದೇಶವನ್ನು ರಕ್ಷಿಸಬೇಕಾಗಿದೆ. ಶಕ್ತವಾದ ಹೋರಾಟ ನಡೆಸಿದ್ದರೆ ಬಾಬರಿ ಮಸೀದಿಯನ್ನು ಕೆಡವಲು ಸಂಘಿಗಳು ಮನಸ್ಸು ಮಾಡುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಧಾರ್ಮಿಕ ಮುಖಂಡರು ಮೌನ ವಹಿಸದೆ ಹೋರಾಟ ರಂಗಕ್ಕೆ ಧುಮುಕಿದಾಗ ಈ ಸಮುದಾಯ ನಿರ್ಭೀತಿಯಿಂದ ಬದುಕಬಹುದು ಎಂದು ಹೇಳಿದರು. 

ಆರೆಸ್ಸೆಸ್ ಸಂವಿಧಾನವನ್ನು ನಾಶ ಮಾಡಲು ಯೋಜನೆ ರೂಪಿಸುತ್ತಿದೆ. ವರ್ಣಾಶ್ರಮ ವ್ಯವಸ್ಥೆ ಜಾರಿಗೆ ತರಲು ಪ್ರಯತ್ನಿಸುವ ಆರೆಸ್ಸೆಸ್ , ದೇಶದ ಶಾಂತಿಯನ್ನು ಕದಡುತ್ತಿದೆ. ಇದರ ವಿರುದ್ಧ ಪಾಪ್ಯುಲರ್ ಫ್ರಂಟ್ ನಿರಂತರ ಹೋರಾಟ ನಡೆಸಲಿದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಪಾಪ್ಯುಲರ್ ಫ್ರಂಟ್ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್ ಮಾತನಾಡಿ, ನಿರಂತರ ಸುಳ್ಳು ಹೇಳುವ ಮೂಲಕ ದೇಶದ ನೈಜ ಸಮಸ್ಯೆಯನ್ನು ಮರೆಮಾಚಲು ಫ್ಯಾಶಿಸ್ಟ್ ಸರ್ಕಾರ ಪ್ರಯತ್ನಿಸುತ್ತಿದೆ. ಕೋವಿಡ್ ನಿಂದ ಸತ್ತವರು ಮತ್ತು ರೈತ ಚಳವಳಿಯಲ್ಲಿ ಮಡಿದವರ ಲೆಕ್ಕ ಕೇಳಿದಾಗಲೂ ಸರ್ಕಾರದ ತನ್ನ ಬಳಿ ಲೆಕ್ಕ ಇಲ್ಲ ಎಂದು ನಿರ್ಲಜ್ಜ ಹೇಳಿಕೆ ನೀಡಿದೆ ಎಂದು ವಾಗ್ದಾಳಿ ನಡೆಸಿದರು. 

ಆರ್ ಎಸ್ ಎಸ್ ಮುಸ್ಲಿಮರ ವಿರೋಧಿ ಮಾತ್ರವಲ್ಲ, ಈ ದೇಶದ ಸಂವಿಧಾನದ ವಿರುದ್ಧವಾಗಿದೆ. ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರ ಕೊರಳ ಪಟ್ಟಿಯನ್ನು ಹಿಡಿಯುತ್ತೇವೆ ಎಂದು ಸಂಘಪರಿವಾರದ ನಾಯಕರು ಹೇಳಿದಾಗ ಅವರ ವಿರುದ್ಧ ಇದುವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಮೈಕ್ ಸಿಕ್ಕಿದರೆ ಕಿರುಚಾಡುವ ಸಂಘಪರಿವಾರದವರು ಹೆದರುಪುಕ್ಕಲರು. ಜಿಲ್ಲಾಧಿಕಾರಿ ಕೊರಳಪಟ್ಟಿ ಬಿಡಿ ಅವರ ಕಚೇರಿಗೆ ಒಂದು ಹೆಜ್ಜೆ ಇಡಲು ಬಿಡುವುದಿಲ್ಲ. ಏಕೆಂದರೆ ಡಿಸಿ ಕಚೇರಿಯ 100 ಮೀಟರ್ ಅಂತರದಲ್ಲಿಯೇ ಪಾಪ್ಯುಲರ್ ಫ್ರಂಟ್ ಕಚೇರಿ ಇದೆ ಎಂಬುದನ್ನು ಅರಿತುಕೊಳ್ಳಿ ಎಂದು ಎಚ್ಚರಿಸಿದರು.

 ಸಾಮಾಜಿಕ ಕಾರ್ಯಕರ್ತ ಇಸ್ಮತ್ ಫಜೀರ್ ಮಾತನಾಡಿ, ಪಾಪ್ಯುಲರ್ ಫ್ರಂಟ್ ಅನ್ಯಾಯದ ವಿರುದ್ಧ ಹೋರಾಟ ನಡೆಸುತ್ತಿರುವುರಿಂದ ನಾನು ಕೂಡ ಇದರ ಭಾಗವಾಗಿದ್ದೇನೆ. ಹೋರಾಟದಲ್ಲಿ ಸದೃಢವಾಗಿ ನಿಂತರೆ ವಿಜಯ ಖಚಿತ ಎಂಬುದನ್ನು ರೈತ ಹೋರಾಟ, ಎನ್ ಆರ್ ಸಿ , ಸಿಎಎ ಹೋರಾಟ ಸಾಬೀತುಪಡಿಸಿದೆ ಎಂದರು.

ಹಂಸಲೇಖ ಅವರು ಅಸ್ಪೃಶ್ಯತೆಯ ವಿರುದ್ಧ ಹೇಳಿಕೆ ನೀಡಿದಾಗ ಉಂಟಾದ ಹೋರಾಟ, ಕಲಾವಿದ ಮುನವ್ವರ್ ಫಾರೂಕಿ ಕಾರ್ಯಕ್ರಮ ರದ್ದುಗೊಳಿಸಿದಾಗ ಉಂಟಾಗದಿರುವುದು ಖೇದಕರ. ಕಾರ್ಯಕ್ರಮ ರದ್ದುಪಡಿಸುವಂತೆ ಮಾಡಿದ ಮನಸ್ಥಿತಿಯೇ ಫ್ಯಾಶಿಸಂ. ಅದನ್ನು ಸೋಲಿಸಲು ಎಲ್ಲರೂ ಕೈ ಜೋಡಿಸಬೇಕು ಎಂದರು.  

ಪಾಪ್ಯುಲರ್ ಫ್ರಂಟ್ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮೊಯಿದೀನ್ ಹಳೆಯಂಗಡಿ ಸ್ವಾಗತಿಸಿದರು. ಜಾಬಿರ್ ಅರಿಯಡ್ಕ ವಂದಿಸಿದರು. ಝಾಹಿದ್ ಮಲಾರ್ ಕಾರ್ಯಕ್ರಮ ನಿರೂಪಿಸಿದರು.



Join Whatsapp