ಎನ್‌ಐಎ, ಈಡಿ ದಾಳಿ ಮೂಲಕ ಪಿಎಫ್‌ಐಯನ್ನು ಮುಗಿಸಲು ಸಾಧ್ಯವಿಲ್ಲ: ಕೋಝಿಕ್ಕೋಡ್‌ ಪಿಎಫ್ಐ ಮಹಾ ಸಮ್ಮೇಳನದಲ್ಲಿ ಅನೀಸ್ ಅಹ್ಮದ್

Prasthutha|

ಕೋಝಿಕ್ಕೋಡ್: ಇಂದು ದೇಶಾದ್ಯಂತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ಧಮನಿಸುವ ಷಡ್ಯಂತ್ರ ನಡೆಯುತ್ತಿದೆ. ಇದಕ್ಕಾಗಿ ಪಿಎಫ್‌ಐ ಕಾರ್ಯಕರ್ತರ ಮೇಲೆ ಯುಎಪಿಎಯಂತಹ ಕಾಯ್ದೆ ಹಾಕಲಾಗುತ್ತಿದೆಯಲ್ಲದೇ, ನಾಯಕರ ಮನೆ ಮೇಲೆ ಎನ್‌ಐಎ, ಇಡಿ ದಾಳಿಗಳು ನಡೆಯುತ್ತಿದೆ. ಈ ಮೂಲಕ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸದ್ದಡಗಿಸಲು ಸಾಧ್ಯವಿಲ್ಲ ಎಂದು ಪಿಎಫ್ಐಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್ ಹೇಳಿದ್ದಾರೆ.

- Advertisement -

ಅವರು ಇಂದು ಕೋಝಿಕ್ಕೋಡ್‌ನಲ್ಲಿ ಪ್ರಜಾಪ್ರಭುತ್ವ ರಕ್ಷಿಸಿ ಅಭಿಯಾನದಡು ನಡೆದ ಬೃಹತ್ ಜನ ಮಹಾ ಸಮ್ಮೇಳನ ಉದ್ಘಾಟಿಸಿ ಮಾತನಾಡುತ್ತಿದ್ದರು. ಇಂದು ಭಾರತದಲ್ಲಿ ಕೇವಲ ಮುಸಲ್ಮಾನರಷ್ಟೇ ಸಂಕಷ್ಟದಲ್ಲಿಲ್ಲ. ಇಡೀ ಭಾರತವೇ ಸಮಸ್ಯೆಯಲ್ಲಿದೆ. ದೇಶದ ಸಂವಿಧಾನ, ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿಯತೊಡಗಿದೆ. ಇದನ್ನು ಕಾಪಾಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಇದನ್ನು ಇತರ ಪಕ್ಷಗಳು ಮಾಡುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಆಝಾದಿಕಾ ಅಮೃತ ಮಹೋತ್ಸವದ ಹೆಸರಲ್ಲಿ ಕೇಂದ್ರ ಸರಕಾರ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನೇ ತಿರುಚಲು ಹೊರಟಿದ್ದು, ಸ್ವಾತಂತ್ರ್ಯ ಸಮರಕ್ಕೆ ಕಿಂಚಿತ್ತೂ ಕೊಡುಗೆ ನೀಡದ ಆರೆಸ್ಸೆಸ್‌‌ನ್ನು ವೈಭವೀಕರಿಸಲು ಹೊರಟಿದೆ ಎಂದರು. ಆದರೆ ಆರೆಸ್ಸೆಸ್‌ಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಇತಿಹಾಸವಿಲ್ಲ. ಅದು ಪ್ರಾರಂಭಗೊಂಡಂದಿನಿಂದಲೇ ಬ್ರಿಟೀಷರಿಗೆ ಸಹಕರಿಸತೊಡಗಿದೆ ಎಂದು ಹೇಳಿದರು.

- Advertisement -

ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ, ಪಾಪ್ಯುಲರ್ ಫ್ರಂಟ್ ರಾಜ್ಯಾಧ್ಯಕ್ಷ ಸಿ.ಪಿ.ಮುಹಮ್ಮದ್ ಬಶೀರ್, ಎಸ್ ಡಿಟಿಯು ರಾಜ್ಯಾಧ್ಯಕ್ಷ ಎ. ವಾಸು, ಪಾಪ್ಯುಲರ್ ಫ್ರಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎ. ಅಬ್ದುಲ್ ಸತ್ತಾರ್, ನ್ಯಾಷನಲ್ ವುಮೆನ್ಸ್ ಫ್ರಂಟ್ ರಾಷ್ಟ್ರೀಯ ಅಧ್ಯಕ್ಷೆ ಲುಬ್ನಾ ಸಿರಾಜ್, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಫಿಝ್ ಅಫ್ಜಲ್ ಖಾಸಿಮಿ, ಕ್ಯಾಂಪಸ್ ಫ್ರಂಟ್ ರಾಜ್ಯ ಉಪಾಧ್ಯಕ್ಷ ಮುಹಮ್ಮದ್ ಶಾನ್ ಮತ್ತಿತರರು ಉಪಸ್ಥಿತರಿದ್ದರು.

ಜನ ಮಹಾ ಸಮ್ಮೇಳನಕ್ಕೂ ಮೊದಲು ನಗರದ ಸ್ಟೇಡಿಯಂನಿಂದ ಸಮ್ಮೇಳನ ಸ್ಥಳವಾದ ಕೋಝಿಕ್ಕೋಡ್ ಬೀಚ್‌‌ವರೆಗೆ ಸ್ವಯಂ ಸೇವಕರ ಆಕರ್ಷಕ ಪಥ ಸಂಚಲನ ನಡೆಯಿತು.



Join Whatsapp