ಪಿ.ಎಫ್.ಐ ಮೇಲಿನ ಎನ್.ಐ.ಎ ದಾಳಿ: ಕಾಂಗ್ರೆಸ್ ಪಕ್ಷ ದ್ವಂದ್ವ ನಿಲುವು ತೋರುತ್ತಿದೆ: ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್

Prasthutha|

ಬೆಂಗಳೂರು: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ದೇಶದ ಹತ್ತು ರಾಜ್ಯಗಳಲ್ಲಿ ಪಿಎಫ್‌ಐ ಕಚೇರಿಗಳು ಮತ್ತು ಪದಾಧಿಕಾರಿಗಳ ಮೇಲಿನ ದಾಳಿ ಮತ್ತು ಬಂಧನಗಳನ್ನು ಸಮರ್ಥಿಸಿದಂತೆ ನೀಡಿರುವ ಹೇಳಿಕೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ ಘಟಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.


ಈ ಹಿಂದೆ ಕಾಂಗ್ರೆಸ್ ಪಕ್ಷದ ನಾಯಕರ ಮೇಲೆ ಇ.ಡಿ ಮತ್ತು ಐ.ಟಿ ದಾಳಿ ನಡೆದಾಗ ಇದೇ ಸರ್ಕಾರಿ ತನಿಖಾ ಸಂಸ್ಥೆಗಳನ್ನ ತೀವ್ರವಾಗಿ ಟೀಕಿಸಿದ್ದು ಇದೇ ರಾಹುಲ್ ಗಾಂಧಿಯವರ? ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಕರ್ನಾಟಕ ಘಟಕದ ಅಧ್ಯಕ್ಷರಾದ ಅಬ್ದುಲ್ ಮಜೀದ್ ಅವರು ಶುಕ್ರವಾರ ಬಿಡುಗಡೆ ಮಾಡಿರುವ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಪ್ರಶ್ನೆ ಮಾಡಿದ್ದಾರೆ.

- Advertisement -

ಇಲ್ಲಿಯವರೆಗೆ ಕಾಂಗ್ರೆಸ್ ಪಕ್ಷ ಜಾತ್ಯತೀತ ಪಕ್ಷವೆಂದು, ಅಲ್ಪಸಂಖ್ಯಾತ, ದಲಿತ ಮತ್ತು ಶೋಷಿತ ವರ್ಗಗಳ ರಕ್ಷಣೆ ಮಾಡುತ್ತದೆ ಎಂದು ಜನರು ನಂಬಿದ್ದರು. ಮಾಜಿ ಪ್ರಧಾನಿಗಳಾದ ಜವಾಹರ್ ಲಾಲ್ ನೆಹರು ಮತ್ತು ಇಂದಿರಾಗಾಂಧಿಯವರು ಶೋಷಿತ ಸಮುದಾಯಗಳನ್ನು ಮೇಲೆತ್ತಲು ದಶಕಗಳ ಕಾಲ ಶ್ರಮ ಹಾಕಿದ್ದರು. ಅದಕ್ಕಾಗಿ ಬಹಳಷ್ಟು ಯೋಜನೆಗಳನ್ನು ರೂಪಿಸಿದ್ದರು. ಆದರೆ ಈಗ ರಾಹುಲ್ ಗಾಂಧಿಯವರು ತಮ್ಮ ಪಕ್ಷದ ಈ ಸಿದ್ಧಾಂತವನ್ನು ಮುರಿದು, ಪಿ.ಎಫ್.ಐ ಭಯೋತ್ಪಾದಕ ಕೃತ್ಯಗಳಲ್ಲಿ ತೋಡಿಗಿಸಿಕೊಂಡಿದೆ ಮತ್ತು ಅಂತಹ ಕೃತ್ಯಗಳಿಗೆ ಆರ್ಥಿಕ ನೆರವು ನೀಡುತ್ತಿದೆ ಎಂಬ ನಿರಾಧಾರ ಆರೋಪ ಮಾಡಿ ಪಿ.ಎಫ್.ಐ ಕಚೇರಿಗಳ ಬೀಗ ಮುರಿದು, ಅದರ ನಾಯಕನ್ನು ಬಂಧಿಸಿರುವ ನರೇಂದ್ರ ಮೋದಿ ಅವರ ಕೋಮುವಾದಿ ಬಿಜೆಪಿ ಸರ್ಕಾರದ ನಡವಳಿಕೆಯನ್ನು ಬೆಂಬಲಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ.

ಪಿ.ಎಫ್.ಐ ಮತ್ತು ಎಸ್ಡಿಪಿಐ ಸಂಘಟನೆಗಳು ಅಲ್ಪಸಂಖ್ಯಾತರ ಮತ್ತು ಶೋಷಿತ ಸಮುದಾಯಗಳ ಒಳಿತಿಗಾಗಿ ದುಡಿಯುತ್ತಿವೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಎನ್.ಐ.ಎ ದಾಳಿಯ ವಿರುದ್ಧ ಜನರು ಸ್ವಯಂಪ್ರೇರಿತರಾಗಿ ಪ್ರತಿಭಟನೆಗಳನ್ನು ಮಾಡುತ್ತಿರುವುದು ಈ ಸಂಘಟನೆಗಳ ಬಗ್ಗೆ ಜನರಲ್ಲಿ ಇರುವ ನಂಬಿಕೆಯನ್ನು ತೋರಿಸುತ್ತದೆ. ಇಂತಹ ಸಂಘಟನೆಗಳನ್ನು ಬೆಂಬಲಿಸಿ ಪುರಾತನ ಮತ್ತು ಪ್ರಜಾಪ್ರಭುತ್ವ ವಿರೋಧಿ ಮಾರ್ಗದಲ್ಲಿ ಪಿ.ಎಫ್.ಐ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ಅದರ ನಾಯಕರನ್ನು ಬಂಧಿಸಿರುವುದನ್ನು ವಿರೋಧಿಸದೆ ರಾಹುಲ್ ಗಾಂಧಿಯವರು ಈ ವಿಚಾರವಾಗಿ ಜಾಣ ಮೌನಕ್ಕೆ ಜಾರಿದ್ದಾರೆ.

ಬಂಧಿತರ ಕುಟುಂಬ ಸದಸ್ಯರಿಗಳಿಗೆ ಬಂಧಿತರನ್ನು ಎಲ್ಲಿಗೆ ಕೊಂಡಯ್ಯಲಾಗಿದೆ ಎಂದು ತಿಳಿಸಲಾಗಿಲ್ಲ. ಕೆಲವರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದರೆ ಒಂದಷ್ಟು ಜನರನ್ನು ದೆಹಲಿಗೆ ಕರೆದುಕೊಂಡು ಹೋಗಲಾಗಿದೆ. ಕಾಂಗ್ರೆಸ್ ಪಕ್ಷದ ಈ ನಡವಳಿಕೆ ಪಿ.ಎಫ್.ಐ ಮತ್ತು ಎಸ್ಡಿಪಿಐ ವಿರುದ್ಧ ಇಂತಹ ಒಂದು ದಾಳಿ ನಡೆಯಲಿ ಎಂದು ಕಾಂಗ್ರೆಸ್ ಪಕ್ಷ ಬಯಸಿತ್ತು ಎಂದು ತೋರಿಸುತ್ತದೆ. ಕಾಂಗ್ರೆಸ್ಸನ್ನು ಜನರು ಈಗಾಗಲೇ ದೇಶಾದ್ಯಂತ ತಿರಸ್ಕರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ದೇಶದ ರಾಜಕೀಯ ನಕ್ಷೆಯಿಂದಲೇ ಆಳಿಸಿ ಹೋಗುವ ದಿನ ಕಾಂಗ್ರೆಸ್ ಪಕ್ಷಕ್ಕೆ ಬರಲಿದೆ.

ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇ.ಡಿ ವಿಚಾರಣೆಗೆ ಕರೆದಾಗ ಎಸ್ಡಿಪಿಐ ಮತ್ತು ಪಿ.ಎಫ್.ಐ ಕಾಂಗ್ರೆಸ್ ಪಕ್ಷದ ಪರವಾಗಿ ನಿಂತಿತ್ತು. ನಮ್ಮ ಆ ನಿಲುವಿಗೆ ಕಾರಣ ಕಾಂಗ್ರೆಸ್ ಮೇಲಿನ ಪ್ರೀತಿ ಅಲ್ಲ, ಆದರೆ ತಮ್ಮ ವಿರೋಧಿಗಳ ವಿರುದ್ಧ ತನಿಖಾ ಸಂಸ್ಥೆಗಳನ್ನು ಬಳಸುತ್ತಿರುವ ಸರ್ಕಾರದ ಅನೀತಿಯ ವಿರುದ್ಧವಾಗಿತ್ತು. ಈ ಸರ್ಕಾರ ಸಮಾಜವನ್ನು ಒಡೆಯುವ ನೀತಿ ಮತ್ತು ಜನರು ನೀಡಿದ ಬಹುಮತದ ದುರುಪಯೋಗವನ್ನು ಖಂಡಿಸಿ ರಾಹುಲ್ ಗಾಂಧಿಯವರಿಂದ ಒಂದು ಸಾಲಿನ ಹೇಳಿಕೆಯನ್ನು ನಾವೆಲ್ಲ ನಿರೀಕ್ಷೆ ಮಾಡಿದ್ದೆವು. ಜನರು ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. 2023ರ ಕರ್ನಾಟಕದ ಚುನಾವಣೆ ಮತ್ತು 2024ರ ಲೋಕಸಭಾ ಚುನಾವಣೆಯಲ್ಲಿ ಇದಕ್ಕೆಲ್ಲ ಸರಿಯಾದ ಉತ್ತರ ಕೊಡಲಿದ್ದಾರೆ.

- Advertisement -