NIA ದಾಳಿ ಮುಸ್ಲಿಂ ಸಮುದಾಯದವನ್ನು ಭಯಪಡಿಸುವ ಪ್ರಯತ್ನ : PFI ಆಕ್ರೋಶ

Prasthutha|

ಬಿಜೆಪಿ ಸರ್ಕಾರದಿಂದ ತನಿಖಾ ಸಂಸ್ಥೆಗಳ ದುರ್ಬಳಕೆ ಎಂದು ಆರೋಪ

- Advertisement -

ಮಂಗಳೂರು : ಬಿಜೆಪಿ ಸರ್ಕಾರ ಎನ್ಐಎ ಮೂಲಕ ಪಿಎಫ್ಐ ಸಂಘಟನೆಯನ್ನು ಗುರಿಪಡಿಸಿ ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಮರನ್ನು ಭೀತಿಗೆ ದೂಡುವ ಪ್ರಯತ್ನ ಮಾಡಿದ್ದಾರೆ ಎಂದು ಪಿಎಫ್ಐ ರಾಜ್ಯ ಸಮಿತಿ ಕಾರ್ಯದರ್ಶಿ ಎ.ಕೆ ಅಶ್ರಫ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮೇಲಿನ ಹಗೆತನ ತೀರಿಸಲು ಬಿಜೆಪಿ ಸರ್ಕಾರ ರಾಷ್ಟ್ರೀಯ ತನಿಖಾ ದಳವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ. ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಸಂಬಂಧ ಪಿಎಫ್ಐ ನಾಯಕರು ಹಾಗೂ ಕಾರ್ಯಕರ್ತರ ಮನೆಗಳ ಮೇಲೆ ಎನ್ಐಎ ನಡೆಸಿದ ದಾಳಿಯ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಅವರು, ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಬಿಜೆಪಿ ಕಾರ್ಯಕರ್ತರಲ್ಲಿ ಭುಗಿಲೆದ್ದಿರುವ ಆಕ್ರೋಶವನ್ನು ತಣಿಸುವ ಮತ್ತು ಮುಸ್ಲಿಂ ಸಮುದಾಯವನ್ನು ಭಯಪಡಿಸುವ ಉದ್ದೇಶದಿಂದ ಬಿಜೆಪಿ ಸರ್ಕಾರ ಎನ್ಐಎ ಅನ್ನು ಬಳಸಿಕೊಂಡಿದೆ ಎಂದು ಹೇಳಿದ್ದಾರೆ.

- Advertisement -

30 ಕಡೆಗಳಲ್ಲಿ ಎನ್ಐಎ ದಾಳಿ ನಡೆಸಿದೆ ಎಂಬ ಮಾಹಿತಿ ಇದ್ದು, ದಾಳಿಗೆ ಒಳಪಟ್ಟ ಹೆಚ್ಚಿನವರಿಗೆ ಪಿಎಫ್ಐ ಜೊತೆ ಸಂಬಂಧ ಇರಲಿಲ್ಲ. ಬೆರಳೆಣಿಕೆಯ ಪಿಎಫ್ಐ ನಾಯಕರು ಹಾಗೂ ಕಾರ್ಯಕರ್ತರ ಮನೆಗಳಿಗಷ್ಟೇ ದಾಳಿ ನಡೆದಿದೆ. ಎಂದು ಅವರು ತಿಳಿಸಿದರು. ಪ್ರವೀಣ್ ನೆಟ್ಟಾರು ಹತ್ಯೆಯಿಂದ ಆಕ್ರೋಶಗೊಂಡಿರುವ ಬಿಜೆಪಿ ಕಾರ್ಯಕರ್ತರನ್ನು ಸಮಾಧಾನಪಡಿಸಲು, ಬಿಜೆಪಿ ಸರ್ಕಾರದ ಆಡಳಿತದ ವೈಫಲ್ಯವನ್ನು ಮರೆಮಾಚಲು ಮತ್ತು ಪಿಎಫ್ಐ ಸಂಘಟನೆಯನ್ನು ಗುರಿಪಡಿಸಲು ಎನ್ಐಎ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಂಡಿರಬಹುದು ಎಂದು ಅವರು ಸಂಶಯ ವ್ಯಕ್ತಪಡಿಸಿದರು. ಬಿಜೆಪಿ ಸರ್ಕಾರ ತನ್ನ ರಾಜಕೀಯ ಮತ್ತು ಸೈದ್ಧಾಂತಿಕ ವಿರೋಧಿಗಳ ವಿರುದ್ಧ ಇ.ಡಿ, ಎನ್ಐಎನಂತಹ ತನಿಖಾ ಸಂಸ್ಥೆಗಳನ್ನು ತನಿಖೆಯ ನೆಪದಲ್ಲಿ ಛೂಬಿಟ್ಟು ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.


ಪ್ರವೀಣ್ ಹತ್ಯೆ ಸ್ಥಳೀಯವಾಗಿ ನಡೆದ ಪ್ರತೀಕಾರದ ಕೊಲೆಯಾಗಿದ್ದು, ಪ್ರಕರಣವನ್ನು ಸ್ಥಳೀಯ ಪೊಲೀಸರೇ ನಿರ್ವಹಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಹೀಗಿದ್ದರೂ ಪ್ರಕರಣವನ್ನು ಎನ್ಐಎಗೆ ವಹಿಸಿ ಇದೊಂದು ದೇಶದ್ರೋಹ, ಭಯೋತ್ಪಾದನೆ ಪ್ರಕರಣ ಎಂಬಂತೆ ಬಿಂಬಿಸಿ ಒಂದು ಸಮುದಾಯ ಮತ್ತು ಒಂದು ಸಂಘಟನೆಯನ್ನು ಗುರಿಪಡಿಸಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.


ರಾಜ್ಯದಲ್ಲಿ ಹಲವಾರು ಕೊಲೆ ಪ್ರಕರಣ ನಡೆದಿದ್ದು, ಸಂಘಪರಿವಾರದವರು ಬೆಳಗಾವಿಯಲ್ಲಿ ಅರ್ಬಾಝ್ ಎಂಬಾತನನ್ನು ಕೊಲೆ ಮಾಡಿದ್ದರು. ಸಮೀರ್ ನರಗುಂದ, ಬೆಳ್ಳಾರೆಯ ಮಸೂದ್, ಸುರತ್ಕಲ್ ನ ಫಾಝಿಲ್ ಹತ್ಯೆ ಪ್ರಕರಣಗಳಲ್ಲಿ ಸಂಘಪರಿವಾರದ ಪಾತ್ರ ಇರುವುದು ಕಂಡುಬಂದಿದೆ. ಈ ಪ್ರಕರಣಗಳನ್ನು ಎನ್ಐಎಗೆ ಯಾಕೆ ವಹಿಸಿಲ್ಲ ಎಂದು ಪ್ರಶ್ನಿಸಿದ ಅವರು, ಶಿವಮೊಗ್ಗದ ಹರ್ಷ ಮತ್ತು ಸುಳ್ಯದ ಪ್ರವೀಣ್ ಹತ್ಯೆ ಪ್ರಕರಣವನ್ನಷ್ಟೇ ಎನ್ಐಎ ವಹಿಸಿರುವುದ ಹಿಂದೆ ಪಿತೂರಿ ಇದೆ ಎಂದು ಆರೋಪಿಸಿದರು.
ಕೋಮು ವೈಷಮ್ಯದಿಂದ ನಡೆದ ಕೊಲೆ ಪ್ರಕರಣಗಳನ್ನು ಸಮಾನವಾಗಿ ಪರಿಗಣಿಸಬೇಕಿದ್ದ ಬಿಜೆಪಿ ಸರ್ಕಾರ ಪಕ್ಷಪಾತಿ ಧೋರಣೆ ಅನುಸರಿಸುತ್ತಿದೆ. ಮುಸ್ಲಿಮರು ಆರೋಪಿಗಳಾಗಿರುವ ಪ್ರಕರಣಗಳನ್ನಷ್ಟೇ ಎನ್ಐಎಗೆ ವಹಿಸುತ್ತಿದ್ದಾರೆ ಎಂದು ಎ.ಕೆ. ಅಶ್ರಫ್ ಅಸಮಾಧಾನ ವ್ಯಕ್ತಪಡಿಸಿದರು.


ಸುದ್ದಿಗೋಷ್ಠಿಯಲ್ಲಿ ಪಿಎಫ್ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್, ಪಿಎಫ್ಐ ನಗರಾಧ್ಯಕ್ಷ ಅಬ್ದುಲ್ ಖಾದರ್ ಕುಳಾಯಿ ಹಾಜರಿದ್ದರು.



Join Whatsapp