ಮಿತ್ತೂರು ಫ್ರೀಡಂ ಕಮ್ಯುನಿಟಿ ಹಾಲ್ ಆಸ್ತಿಯನ್ನು ಜಪ್ತಿ ಮಾಡಿದ ಎನ್’ಐಎ

Prasthutha|

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇಡ್ಕಿಡು ಗ್ರಾಮದಲ್ಲಿರುವ ಫ್ರೀಡಂ ಕಮ್ಯುನಿಟಿ ಹಾಲ್’ನ ಆಸ್ತಿಯನ್ನು ಎನ್’ಐಎ ಅಥವಾ ನಿಯೋಜಿತ ಪ್ರಾಧಿಕಾರದ ಪೂರ್ವಾನುಮತಿಯಿಲ್ಲದೆ ಯಾವುದೇ ರೀತಿಯಲ್ಲಿ ವರ್ಗಾಯಿಸುವುದಾಗಲೀ, ಗುತ್ತಿಗೆ ನೀಡುವುದಾಗಲೀ, ವಿಲೇವಾರಿ ಮಾಡುವುದಾಗಲೀ, ಅದರ ಸ್ವರೂಪವನ್ನು ಬದಲಾಯಿಸುವುದಾಗಲೀ ಅಥವಾ ಈ ಆಸ್ತಿಯೊಂದಿಗೆ ವ್ಯವಹರಿಸುವುದಾಗಲೀ ಮಾಡಬಾರದು ಎಂದು ನೆಟ್ಟಾರು ಪ್ರವೀಣ್ ಹತ್ಯೆ ಪ್ರಕರಣದ ಎನ್’ಐಎ ತನಿಖಾಧಿಕಾರಿ ಷಣ್ಮುಗಂ ಎಂ.ಆದೇಶ ಹೊರಡಸಿದ್ದಾರೆ.

- Advertisement -


ಆದೇಶ ಪ್ರತಿಯನ್ನು ಕೇಂದ್ರ ಗೃಹ ಇಲಾಖೆಯ ಸಿಟಿಸಿಆರ್ ವಿಭಾಗದ ಜಂಟಿ ಕಾರ್ಯದರ್ಶಿ, ಎನ್’ಐಎ ನವದೆಹಲಿಯ ಇದರ ಡಿಜಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ವಿಟ್ಲ ಪೊಲೀಸ್ ಠಾಣೆಯ ಇನ್ಸ್’ಪೆಕ್ಟರ್ ಅವರಿಗೆ ರವಾನಿಸಲಾಗಿದೆ.
ಅದೇ ರೀತಿ ಫ್ರೀಡಂ ಎಜುಕೇಷನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್ ಅವರಿಗೂ ಪ್ರತಿಯನ್ನು ಕಳುಹಿಸಲಾಗಿದೆ.


ಪ್ರವೀಣ್ ನೆಟ್ಟಾರು ಅವರ ಹತ್ಯೆ ಸಂಬಂಧ ಬೆಳ್ಳಾರೆ ಠಾಣೆಯಲ್ಲಿ FIR ಸಂಖ್ಯೆ 63/2022 U/S 302 R/W 34 ಐಪಿಸಿ, 120ಬಿ ಐಪಿಸಿ, ಯುಎಪಿಎ 16, 18 ಸೆಕ್ಷನ್’ಗಳಡಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಆರೋಪಿಗಳಿಗೆ ಫ್ರೀಡಂ ಕಮ್ಯುನಿಟಿ ಹಾಲ್’ನಲ್ಲಿ ತರಬೇತಿ ನೀಡಿರುವುದು ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ. ಆದ್ದರಿಂದ ಯುಎ (ಪಿ) ಕಾಯ್ದೆ, 1967 ರ ಸೆಕ್ಷನ್ 25 ರ ನಿಬಂಧನೆಗಳ ಅಡಿಯಲ್ಲಿ ಈ ಆಸ್ತಿಯನ್ನು ಮುಟ್ಟುಗೋಲು ಹಾಕಲು ಆದೇಶಿರುವುದಾಗಿ ಷಣ್ಮುಗಂ ಅವರು ಆದೇಶದಲ್ಲಿ ತಿಳಿಸಿದ್ದಾರೆ.

- Advertisement -


ಆದ್ದರಿಂದ ಫ್ರೀಡಂ ಕಮ್ಯುನಿಟಿ ಹಾಲ್’ನ 0.20 ಎಕರೆ ಆಸ್ತಿಯನ್ನು ಎನ್’ಐಎ ಅಥವಾ ನಿಯೋಜಿತ ಪ್ರಾಧಿಕಾರದ ಪೂರ್ವಾನುಮತಿಯಿಲ್ಲದೆ ಯಾವುದೇ ರೀತಿಯಲ್ಲಿ ವರ್ಗಾಯಿಸುವುದಾಗಲೀ, ಗುತ್ತಿಗೆ ನೀಡುವುದಾಗಲೀ, ವಿಲೇವಾರಿ ಮಾಡುವುದಾಗಲೀ, ಅದರ ಸ್ವರೂಪವನ್ನು ಬದಲಾಯಿಸುವುದಾಗಲೀ ಅಥವಾ ಈ ಆಸ್ತಿಯೊಂದಿಗೆ ವ್ಯವಹರಿಸುವುದಾಗಲೀ ಮಾಡಬಾರದು ಎಂದು ಪ್ರಕಟಣೆ ಹೊರಡಿಸಿದ್ದಾರೆ.

Join Whatsapp