ಸಂಘಪರಿವಾರದಿಂದ ನ್ಯೂಸ್ 18 ವರದಿಗಾರನಿಗೆ ಬೆದರಿಕೆ: ಪತ್ನಿಯೊಂದಿಗೆ ಅನುಚಿತ ವರ್ತನೆ; ದೂರು ದಾಖಲು

Prasthutha|

ನವದೆಹಲಿ: ನ್ಯೂಸ್ 18 ನಲ್ಲಿ ವರದಿಗಾರರಾಗಿರುವ ಸೌರಭ್ ಶರ್ಮಾ ಅವರನ್ನು ಗುರಿಯಾಗಿಸಿ ಅವರ ಮನೆಗೆ ದಾಳಿ ನಡೆಸಿದ ಸಂಘಪರಿವಾರದ ಕಾರ್ಯಕರ್ತರು, ಅವರನ್ನು ಪಾಕಿಸ್ತಾನಿ ಎಂದು ಜರಿದು ಬೆದರಿಕೆ ಹಾಕಿದ ಮತ್ತು ಪತ್ನಿಯೊಂದಿಗೆ ಅನುಚಿತವಾಗಿ ವರ್ತಿಸಿದ ಘಟನೆ ನೋಯ್ಡಾದಿಂದ ವರದಿಯಾಗಿದೆ.

- Advertisement -

ಇದಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ಘಟನೆಯ ಕುರಿತು ಮಾಧ್ಯಮದೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಸೌರಭ್ ಪತ್ನಿ, ಖ್ಯಾತ ಪತ್ರಕರ್ತೆ ಅಂಕಿತಾ ಶರ್ಮಾ ಅವರು ‘ನಾನು ಬಾಲ್ಕನಿಯಲ್ಲಿ ನಿಂತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳ ತಂಡವೊಂದು ಅಪಾರ್ಟ್ ಮೆಂಟ್ ಗೆ ದಾಳಿ ನಡೆಸಿತ್ತು. ಇದರಿಂದ ನಾನು ಭಯಗೊಂಡಿದ್ದೆ ಎಂದು ತಿಳಿಸಿದ್ದಾರೆ.

- Advertisement -

ಕಳೆದ ಭಾನುವಾರ ರಾತ್ರಿ ರಾಮನವಮಿ ಸಂದರ್ಭದಲ್ಲಿ ಧ್ವನಿವರ್ಧಕದ ಮೂಲಕ ಸಂಗೀತ ಹಾಕಿದ ಹಿನ್ನೆಲೆಯಲ್ಲಿ ಇದರ ವಿರುದ್ಧ ದೂರು ನೀಡಿದ್ದಕ್ಕಾಗಿ ದಂಪತಿಯನ್ನು ಗುರಿಯಾಗಿಸಿ ದಾಳಿ ನಡೆಸಿ ಬೆದರಿಕೆ ಹಾಕಲಾಗಿದೆ ಎಂದು ಹೇಳಲಾಗಿದೆ.

ನ್ಯೂಸ್ 18 ಸುದ್ದಿವಾಹಿನಿಯಲ್ಲಿ ವರದಿಗಾರರಾಗಿರುವ ಸೌರಭ್ ಶರ್ಮಾ ಅವರು ಧ್ವನಿವರ್ಧಕ ಮೂಲಕ ಜೋರಾಗಿ ಸಂಗೀತ ಹಾಕಿದ ಹಿನ್ನೆಲೆಯಲ್ಲಿ ಸ್ಥಳೀಯ ಠಾಣೆಗೆ ಕರೆ ಮಾಡಿ ದೂರು ನೀಡಿದ್ದರು. ಈ ಬಗ್ಗೆ ಸಂಘಪರಿವಾರದ ಕಾರ್ಯಕರ್ತರು ಪೊಲೀಸರ ಸಮ್ಮುಖದಲ್ಲೇ ತನ್ನನ್ನು ಗುರಿಯಾಗಿಸಿ ಪಾಕಿಸ್ತಾನಿ ಎಂದು ಜರಿದು, ಬೆದರಿಕೆ ಹಾಕಿದ್ದರು. ಪತ್ನಿಯ ಬಟ್ಟೆಗಳನ್ನು ಕಿತ್ತು ಹಾಕುವುದಾಗಿ ಮತ್ತು ಕುಟುಂಬದ ಮೇಲೆ ಹಲ್ಲೆ ನಡೆಸುವುದಾಗಿ ಬೆದರಿಕೆ ಹಾಕಿರುವುದಾಗಿ ಆರೋಪಿಸಿದ್ದಾರೆ.

ಈ ಮಧ್ಯೆ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 352, 504 ಮತ್ತು 506 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಬಿಸ್ರಖ್ ಪೊಲೀಸ್ ಠಾಣಾಧಿಕಾರಿ ಗೌತಮ್ ಬಹದ್ದೂರ್ ಸಿಂಗ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

Join Whatsapp