ಹುಬ್ಬಳ್ಳಿ: ಕೋವಿಡ್ 19 ಸಾಂಕ್ರಾಮಿಕದ ಬಗ್ಗೆ ಗಾಬರಿಯಾಗಬೇಕಿಲ್ಲ ಆದರೆ ಎಚ್ಚರಿಕೆಯಿಂದಿರುವುದು ಅಗತ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ನಾಳೆ ಕೋವಿಡ್ ಕುರಿತು ಕಂದಾಯ ಸಚಿವರು ಹಾಗೂ ಆರೋಗ್ಯ ಸಚಿವ ಡಾ: ಸುಧಾಕರ್ ಅವರು ಸಭೆ ನಡೆಸಲಿದ್ದು, ಬೋಸ್ಟರ್ ಡೋಸ್’ಗಳನ್ನು ಕೊಡಲು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಶಿಬಿರಗಳನ್ನು ಏರ್ಪಡಿಸುವುದು, ಪರೀಕ್ಷೆಗಳನ್ನು ನಡೆಸುವುದು, ಪ್ರತಿಯೊಂದು ಐಎಲ್’ಐ, ಸಾರಿ ಪ್ರಕರಣಗಳಿಗೆ ಕಡ್ಡಾಯವಾಗಿ ಪರೀಕ್ಷೆ ಕೈಗೊಳ್ಳುವುದು, ಮಾಸ್ಕ್ ಧರಿಸುವುದು, ಅಂತರ ಕಾಪಾಡುವುದು ಮುಂತಾದ ಕ್ರಮ ಕೈಗೊಳ್ಳಲಾಗುವುದು. ಆರೋಗ್ಯ ಮೂಲಸೌಕರ್ಯಗಳಾದ ಔಷಧಿ, ಲಸಿಕೆ ಇವೆಲ್ಲವನ್ನೂ ದಾಸ್ತಾನು ಮಾಡಿಕೊಳ್ಳಲು ಕ್ರಮ ವಹಿಸಬೇಕು, ಯಾವುದೇ ಸಂದರ್ಭದಲ್ಲಿ ಯಾವುದೇ ಕೊರತೆಯಾಗಬಾರದು, ಆಮ್ಲಜನಕ ಘಟಕಗಳನ್ನು ಡ್ರೈ ರನ್ ಮಾಡಿ ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಆರೋಗ್ಯ ಸಚಿವರಿಗೆ ಸೂಚನೆ ನೀಡಲಾಗಿದೆ. ವಿಮಾನ ನಿಲ್ದಾಣದಲ್ಲಿ ಯೂ ನಿರಂತರವಾಗಿ ನಿಗಾ ವಹಿಸಿ, ನಿರ್ಬಂಧಗಳನ್ನು ಹೇರಲಾಗಿದೆ. ವ್ಯಕ್ತಿ, ಸಂಘ, ಸರ್ಕಾರ, ಸಮಾಜ ಎಲ್ಲರೂ ಸೇರಿ ಇದನ್ನು ಎದುರಿಸಬೇಕಿದೆ. ಹೊಸ ವರ್ಷಾಚರಣೆಗೆ ಮಾರ್ಗಸೂಚಿಗಳನ್ನು ಹೊರಡಿ ಸಲಾಗುವುದು ಎಂದರು.
ಸದನದಲ್ಲಿ ಎರಡು ಅಥವಾ ಮೂರು ದಿನ ಉತ್ತರ ಕರ್ನಾಟಕದ ವಿಷಯಗಳ ಬಗ್ಗೆ ಅವಕಾಶ ಮಾಡಿಕೊಡಲು ಸಭಾಧ್ಯಕ್ಷರಿಗೆ ಕೋರಲಾಗಿದೆ. ಸದನದಲ್ಲಿ ಎರಡೂ ಕಡೆ ಈ ವಿಷಯ ಕೈಗೊಳ್ಳಲು ಉತ್ಸುಕರಾಗಿದ್ದಾರೆ ಎಂದರು.
ಅವಧಿ ಪೂರ್ವ ಚುನಾವಣೆ ಇಲ್ಲ ಸಿಎಂ ಬೊಮ್ಮಾಯಿ
ಅವಧಿ ಪೂರ್ವ ಚುನಾವಣೆ ಮಾಡುವ ಯೋಚನೆಯನ್ನು ನಮ್ಮ ಸರ್ಕಾರ ಅಥವಾ ಪಕ್ಷ ಮಾಡಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಜನರಿಗೆ ನಮ್ಮ ಕಾರ್ಯಕ್ರಮ ಮುಟ್ಟಿಸಿ, ಆ ವರದಿಯ ಆಧಾರದ ಮೇಲೆ ಸಕಾರಾತ್ಮಕ ಜನಾದೇಶ ಪಡೆಯಲು ನಾವು ಪ್ರಯತ್ನ ಮಾಡು ತ್ತಿದ್ದೇವೆ. ಬಹುಶಃ ಕಾಂಗ್ರೆಸ್ ಗೆ ಸಮಯ ಕೊಟ್ಟಷ್ಟು ಅವರ ಒಳಜಗಳ ಹೆಚ್ಚಾಗುತ್ತದೆ ಎಂದು ಅಭದ್ರತೆ ಕಾಡುತ್ತಿದೆ. ಚುನಾವಣೆ ಮುಂಚೆಯಾಗುತ್ತದೆ ಜಗಳವಾಡಬೇಡಿ ಎಂದು ಕಾಂಗ್ರೆಸ್ ನ ಕಾರ್ಯಕರ್ತರಿಗೆ ನೀಡಿರುವ ಸಂದೇಶ ಎಂದರು.