ಬೆಂಗಳೂರು: ಹೊಸ ಹುದ್ದೆ ತೋರಿಸದೆ ಹಾಲಿಯಿರುವ ಹುದ್ದೆಯಿಂದ ಅಧಿಕಾರಿಯನ್ನು ವರ್ಗಾವಣೆ ಮಾಡುವ ರಾಜ್ಯ ಸರ್ಕಾರದ ಧೋರಣೆಗೆ ಕಿಡಿಕಾರಿರುವ ಕರ್ನಾಟಕ ಹೈಕೋರ್ಟ್, ವರ್ಗಾವಣೆ ಆದೇಶ ಹೊರಡಿಸಿದಾಗ ಕಡ್ಡಾಯವಾಗಿ ಅಧಿಕಾರಿಗಳಿಗೆ ಹೊಸ ಹುದ್ದೆ ತೋರಿಸಬೇಕು ಎಂದು ಮಹತ್ವದ ತೀರ್ಪು ನೀಡಿದೆ.
ಚಾಮರಾಜನಗರ ಜಿಲ್ಲೆಯ ಹನೂರು ಪುರಸಭೆ ಮುಖ್ಯಅಧಿಕಾರಿ ಹುದ್ದೆಯಿಂದ ತಮ್ಮನ್ನು ವರ್ಗಾವಣೆ ಮಾಡಿದ್ದ ರಾಜ್ಯ ಸರ್ಕಾರವು ನಂತರ ಯಾವುದೇ ಹುದ್ದೆ ತೋರಿಸಿಲ್ಲ ಎಂದು ಆಕ್ಷೇಪಿಸಿ ಮೂರ್ತಿ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ಸುನಿಲ್ ದತ್ ಯಾದವ್ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.
ಹನೂರು ಪುರಸಭೆ ಮುಖ್ಯ ಅಧಿಕಾರಿ ಹುದ್ದೆಯಿಂದ ಅರ್ಜಿದಾರರನ್ನು ವರ್ಗಾಯಿಸಿ 2021ರ ಡಿಸೆಂಬರ್ 23ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿರುವ ಪೀಠವು ವರ್ಗಾವಣೆ ಮುನ್ನ ಹೊಂದಿದ್ದ ಹುದ್ದೆಗೆ ಅರ್ಜಿದಾರರನ್ನು ಮರು ನಿಯೋಜಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.
ಹಾಲಿ ಪ್ರಕರಣದಲ್ಲಿ ಅರ್ಜಿದಾರ (ಮೂರ್ತಿ) ಹುದ್ದೆಗೆ ತಮ್ಮನ್ನು ವರ್ಗಾವಣೆ ಮಾಡುವಂತೆ ಪರಶಿವಯ್ಯ ಅವರು ಕೋರಿದ್ದರು. ಹುದ್ದೆ ಖಾಲಿ ಇಲ್ಲದೆ ಹೋದರೂ ಶಾಸಕರೊಬ್ಬರ ಪತ್ರ ಆಧರಿಸಿ ಪರಶಿವಯ್ಯ ಅವರನ್ನು ವರ್ಗಾವಣೆ ಮಾಡಲಾಗಿದೆ. ಏನೇ ಇದ್ದರೂ ವರ್ಗಾವಣೆ ಪ್ರಕ್ರಿಯೆಯಲ್ಲಿ ನಿಯಮಗಳು ಪಾಲನೆಯಾಗಬೇಕು. ಅರ್ಜಿದಾರರು ವರ್ಗಾವಣೆಯಾಗಿ ಆರು ತಿಂಗಳು ಕಳೆದರೂ ಯಾವುದೇ ಹುದ್ದೆ ತೋರಿಸಿರಲಿಲ್ಲ. ಸಾಮಾನ್ಯ ವರ್ಗಾವಣೆ ಅವಧಿ ನಂತರ ಖಾಲಿಯಿರುವ ಹುದ್ದೆಗಳಿಗೆ ಹೊರತುಪಡಿಸಿ ಬೇರೆ ಯಾವುದೇ ವರ್ಗಾವಣೆ ಮಾಡುವಂತಿಲ್ಲ ಎಂದು ಅಭಿಪ್ರಾಯಪಟ್ಟಿರುವ ಪೀಠವು ಅರ್ಜಿದಾರರನ್ನು ಹನೂರು ಪುರಸಭೆ ಮುಖ್ಯ ಅಧಿಕಾರಿಯಾಗಿ ಮರು ನಿಯೋಜಿಸುವಂತೆ ಸರ್ಕಾರಕ್ಕೆ ಆದೇಶಿಸಿದೆ.
ಹೊಸ ಹುದ್ದೆ ತೋರಿಸದೆ, ಹಾಲಿಯಿರುವ ಹುದ್ದೆಯಿಂದ ಅಧಿಕಾರಿಯನ್ನು ಎತ್ತಂಗಡಿ ಮಾಡಿದ ಹಲವು ಪ್ರಕರಣಗಳನ್ನು ನ್ಯಾಯಾಲಯ ಗಮನಿಸಿದೆ. ಸರ್ಕಾರದ ಈ ನಡೆಯಿಂದ ವರ್ಗಾವಣೆಗೊಂಡ ಅಧಿಕಾರಿಗಳು ಸಂಬಂಧಪಟ್ಟ ಇಲಾಖೆ ಮುಂದೆ ಹೋಗಿ ತಮಗೆ ಹುದ್ದೆ ತೋರಿಸುವಂತೆ ಕೋರುವ ಪರಿಸ್ಥಿತಿ ಉದ್ಭವಿಸುತ್ತದೆ. ಇಂತಹ ಸಮಸ್ಯೆಗೆ ಸರ್ಕಾರ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದು ಪೀಠವು ಸೂಚಿಸಿದೆ.
ಎಂ ಅರುಣ್ ಪ್ರಸಾದ್ ಮತ್ತು ರಾಜ್ಯ ಅಬಕಾರಿ ಆಯುಕ್ತರ ನಡುವಿನ ಪ್ರಕರಣದಲ್ಲಿ ಹೈಕೋರ್ಟ್ ವಿಭಾಗೀಯ ಪೀಠ ನೀಡಿದ ತೀರ್ಪು ಆಧರಿಸಿ ವರ್ಗಾಣೆ ಸಂಬಂಧ 2017ರ ಮಾರ್ಚ್ 27ರಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ವರ್ಗಾವಣೆ ಮಾಡಿದ ಸಂದರ್ಭದಲ್ಲಿ ಅಧಿಕಾರಿಗೆ ಹುದ್ದೆ ತೋರಿಸದಿದ್ದರೆ, ಅದಕ್ಕೆ ಕಾರಣವನ್ನು ಲಿಖಿತವಾಗಿ ನಮೂದಿಸಬೇಕು. ಅದು ಸಹ ಆಡಳಿತಾತ್ಮಕ ಕಾರಣಗಳಾಗಿರಬೇಕು. ಕಾರಣ ನಮೂದಿಸಿದ ನಂತರ ವರ್ಗಾವಣೆ ಆದೇಶವನ್ನು ಇಲಾಖಾ ಮುಖ್ಯಸ್ಥರು ಮರು ಪರಿಶೀಲನೆ ನಡೆಸುವಂತಿರಬೇಕು ಎಂಬುದಾಗಿ ಸರ್ಕಾರದ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಆದರೆ, ವಿಭಾಗೀಯ ಪೀಠ ತೀರ್ಪಿನಲ್ಲಿ ವ್ಯಕ್ತಪಡಿಸಿದ ಅನಿಸಿಕೆ ಮತ್ತು ಸರ್ಕಾರದ ಸುತ್ತೋಲೆಯ ನಿಯಮಗಳು ಈ ಪ್ರಕರಣದಲ್ಲಿ ಪಾಲನೆಯಾಗಿಲ್ಲ. ಹೊಸ ಹುದ್ದೆಗಳನ್ನು ತೋರಿಸದೆ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಪದ್ಧತಿ ಮರುಕಳಿಸುತ್ತಿದೆ ಎಂದು ಆದೇಶದಲ್ಲಿ ಕೋರ್ಟ್ ಕಿಡಿಕಾರಿದೆ.
ಪ್ರಕರಣದ ಹಿನ್ನೆಲೆ: ಹನೂರು ನಗರಸಭೆ ಮುಖ್ಯ ಅಧಿಕಾರಿ ಹುದ್ದೆಯಿಂದ ಮೂರ್ತಿ ಅವರನ್ನು ವರ್ಗಾವಣೆ ಮಾಡಿ 2021ರ ಡಿಸೆಂಬರ್ 23ರಂದು ಆದೇಶಿಸಿದ್ದ ಸರ್ಕಾರ, ಆ ಹುದ್ದೆಗೆ ಪರಶಿವಯ್ಯ ಎಂಬುವವರನ್ನು ನಿಯೋಜಿಸಿತ್ತು. ಆದರೆ, ಮೂರ್ತಿ ಅವರಿಗೆ ಹೊಸ ಹುದ್ದೆಯನ್ನು ತೋರಿಸದೆ, ಹುದ್ದೆ ಪಡೆಯುವುದಕ್ಕೆ ಸಂಬಂಧಪಟ್ಟ ಇಲಾಖೆ ಮುಂದೆ ಹಾಜರಾಗುವಂತೆ ಸೂಚಿಸಿತ್ತು. ಈ ಆದೇಶ ಪ್ರಶ್ನಿಸಿ ಮೂರ್ತಿ ಹೈಕೋರ್ಟ್ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಅದು ವಿಚಾರಣೆ ಹಂತದಲ್ಲಿರುವಾಗ 2022ರ ಜುಲೈ 20ರಂದು ಮೂರ್ತಿಗೆ ಉಳ್ಳಾಲ ಪುರಸಭೆಯಲ್ಲಿ ಖಾಲಿಯಿದ್ದ ಹುದ್ದೆ ತೋರಿಸಲಾಗಿತ್ತು.
(ಕೃಪೆ: ಬಾರ್ ಆ್ಯಂಡ್ ಬೆಂಚ್)