ಸೈಬರ್ ಅಪರಾಧ ತಡೆಗೆ ಹೊಸ ಕಾನೂನು: ಜಿ. ಪರಮೇಶ್ವರ

Prasthutha|

ಮಂಗಳೂರು: ಸೈಬರ್ ಅಪರಾಧಗಳನ್ನು ತಡೆಗಟ್ಟಲು ಸಮಿತಿಯೊಂದನ್ನು ರಚಿಸಿದ್ದು, ಸಮಿತಿ ಸದ್ಯದಲ್ಲೇ ಹೊಸ ಕಾನೂನು ರೂಪಿಸಲಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದ್ದಾರೆ.

- Advertisement -

ಬಜಪೆ, ಮಂಗಳೂರು ಗ್ರಾಮಾಂತರ ಠಾಣೆ ಮತ್ತು ನಗರ ಸಶಸ್ತ್ರ ದಳದ ಹೊಸ ಕಟ್ಟಡಗಳ ಉದ್ಘಾಟನೆಯನ್ನು ನೆರವೇರಿಸಿದ ಬಳಿಕ ಗೃಹ ಸಚಿವರು ಪತ್ರಕರ್ತರ ಜೊತೆ ಮಾತನಾಡಿದರು. ಸೈಬರ್ ಅಪರಾಧ ತಡೆಗೆ ಸಮರ್ಪಕ ಕಾನೂನು ಜಾರಿಗೊಳಿಸುವುದಕ್ಕಾಗಿ ರಚಿಸಿರುವ ಸಮಿತಿಯಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಗೃಹ ಇಲಾಖೆಯ ತಜ್ಞರು ಇದ್ದಾರೆ. ಕಾನೂನು ತಿದ್ದುಪಡಿ, ಹೊಸ ನಿಯಮಗಳ ಅಳವಡಿಕೆ ಮತ್ತು ಜಾರಿಗೆ ಅವರು ನೆರವಾಗಲಿದ್ದಾರೆ ಎಂದರು.

- Advertisement -

ರಾಜ್ಯದಲ್ಲಿ ಈಚಿನ ವರ್ಷಗಳಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ. ಅದೇ ಸಮಯದಲ್ಲಿ ವೈಟ್‌ ಕಾಲರ್’ ಅಪರಾಧಗಳು ಹೆಚ್ಚುತ್ತಿವೆ. ಪೊಲೀಸ್ ವ್ಯವಸ್ಥೆಗೆ ಆಧುನಿಕ ಸ್ಪರ್ಶ ನೀಡಲಿದ್ದೇವೆ. ಇದರಿಂದಾಗಿ ಈ ಅಪರಾಧಗಳನ್ನು ತಡೆಯಲು ಅನುಕೂಲ ವಾತಾವರಣ ನಿರ್ಮಾಣ ಆಗಲಿದೆ. ಕಂಪ್ಯೂಟರ್ ಶಿಕ್ಷಣ, ಸೈಬರ್ ಅಪರಾಧ ತಡೆಗೆ ತರಬೇತಿ ಮತ್ತು ಶಸ್ತ್ರಾಸ್ತ್ರ ಬಳಕೆಯಲ್ಲಿ ಸಮರ್ಪಕತೆ ಮೂಡಿಸುವುದು ಆಧುನೀಕರಣದ ಭಾಗವಾಗಿದೆ ಎಂದರು.

18 ಸಾವಿರ ಕಾನ್‌ಸ್ಟೆಬಲ್ ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಯುತ್ತಿದೆ.ತಾಂತ್ರಿಕ ಶಿಕ್ಷಣ ಪಡೆದವರು‌ ಕೂಡ ಪೊಲೀಸ್ ಇಲಾಖೆ ಸೇರಲು ಇಚ್ಛಿಸಿದ್ದಾರೆ. ಪೊಲೀಸ್‌ ವ್ಯವಸ್ಥೆಯ ಆಧುನೀಕರಣದಲ್ಲಿ ಇದು ಮಹತ್ವದ ಹೆಜ್ಜೆ ಆಗಲಿದೆ ಎಂದು ಜಿ. ಪರಮೇಶ್ವರ್ ಹೇಳಿದರು.

ರಾಜ್ಯದ ಪೊಲೀಸ್ ಠಾಣೆಗಳನ್ನು ಕೇಂದ್ರೀಕೃತ ವ್ಯವಸ್ಥೆಯಡಿ ನಿಯಂತ್ರಿಸುವ ಕಮಾಂಡ್ ಸೆಂಟರ್ ಬೆಂಗಳೂರಿನಲ್ಲಿ ಮೂರು ತಿಂಗಳ ಒಳಗೆ ಆರಂಭವಾಗಲಿದೆ ಎಂದು ಅವರು ತಿಳಿಸಿದರು.



Join Whatsapp