ಬಲಪಂಥೀಯ ವಿಚಾರಧಾರೆ ಪ್ರಚಾರದಲ್ಲಿ ತೊಡಗಿರುವ ನ್ಯೂ ಹಾರಿಜನ್ ಪಬ್ಲಿಕ್ ಸ್ಕೂಲ್ !

Prasthutha|

►► ಗೂಗಲ್ ಮ್ಯಾಪ್ ನಲ್ಲಿ ಜ್ಞಾನವಾಪಿ ಮಸೀದಿ ಬದಲು ದೇವಾಲಯವಾಗಿ ಅಪ್ ಡೇಟ್ ಮಾಡಲು ಸೂಚನೆ

- Advertisement -

ಬೆಂಗಳೂರು: ಬೆಂಗಳೂರಿನ ಖಾಸಗಿ ಶಾಲೆಯೊಂದು ತನ್ನ ಹಳೆಯ ವಿದ್ಯಾರ್ಥಿಗಳಿಗೆ ಈಮೇಲ್ ಕಳುಹಿಸಿ, ಗೂಗಲ್ ಮ್ಯಾಪ್ ನಲ್ಲಿ ಜ್ಞಾನವಾಪಿ ಮಸೀದಿ ಎಂದು ಇರುವುದನ್ನು ಜ್ಞಾನ ವಾಪಿ ದೇವಾಲಯವಾಗಿ ಅಪ್ ಡೇಟ್ ಮಾಡಲು ಸೂಚಿಸಿರುವುದು ಇದೀಗ ವಿವಾದವಾಗಿದೆ. ಮೇ 20ರಂದು ಬೆಂಗಳೂರಿನ ನ್ಯೂ ಹಾರಿಜನ್ ಪಬ್ಲಿಕ್ ಸ್ಕೂಲ್‌ನಿಂದ ಈ ಸಂದೇಶ ಎಲ್ಲಾ ವಿದ್ಯಾರ್ಥಿಗಳಿಗೆ ಹೋಗಿದೆ. ಈ ಸುದ್ದಿ ಇದೀಗ ವಿವಾದಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಶಾಲೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.


ನಿಮ್ಮಲ್ಲಿ ಕೇಳಿಕೊಳ್ಳುವುದೇನಂದರೆ, “ನೀವು ನಿಮ್ಮ ಹಿಂದೂ ಸ್ನೇಹಿತರಿಗೆಲ್ಲ ಗೂಗಲ್ ನಲ್ಲಿ ಜ್ಞಾನವಾಪಿ ದೇವಾಲಯ ಎಂದು ಅಪ್ಡೇಟ್ ಮಾಡುವಂತೆ ಕೇಳಿಕೊಳ್ಳಿ. ಜ್ಞಾನವಾಪಿ ಮಸೀದಿ ಎಂದಿರುವುದನ್ನು ಜ್ಞಾನವಾಪಿ ದೇವಾಲಯ ಮಾಡಲು ಪ್ರಯತ್ನಿಸಿ” ಎಂದು ಶಾಲೆಯಿಂದ ಈಮೇಲ್ ಕಳುಹಿಸಲಾಗಿದೆ. ಕಾಶಿಯ ಜ್ಞಾನವಾಪಿ ಮಸೀದಿ ಬಗ್ಗೆ ಭಾರಿ ವಿವಾದ, ಕೋರ್ಟ್ ವಿಚಾರಣೆ ಇರುವಾಗಲೇ ಈ ಸಂದೇಶ ಕಳುಹಿಸಲಾಗಿದೆ. ಇದರಿಂದ ನಾವು ಚಕಿತರಾಗಿರುವುದಾಗಿ ಬಹುತೇಕ ಹಳೆಯ ವಿದ್ಯಾರ್ಥಿಗಳು ಹೇಳಿದ್ದಾರೆ. ರಾಜಕೀಯ ಪ್ರೇರಿತ ವ್ಯಕ್ತಿಗಳು ಈ ಶಾಲೆಯ ಆಡಳಿತವನ್ನು ಕೈಗೆ ತೆಗೆದುಕೊಂಡಿರುವುದರ ಪರಿಣಾಮ ಇದು ಎನ್ನಲಾಗಿದೆ.

- Advertisement -


ನ್ಯೂ ಹಾರಿಜನ್ ಎಜುಕೇಶನಲ್ ಗುಂಪು ರಾಮ ಮಂದಿರ ಟ್ರಸ್ಟ್ ಗೆ ದೇಣಿಗೆ ನೀಡಿದೆ. ರಾಮ ಮಂದಿರ ಅಡಿಗಲ್ಲು ವೇಳೆ ಶಾಲೆಯಲ್ಲೂ ಭೂಮಿ ಪೂಜೆ ನಡೆಸಿತ್ತು. ಶಾಲೆಯ ಎಲ್ಲ ಸಿಬ್ಬಂದಿ ಕಾಶ್ಮೀರ ಫೈಲ್ಸ್ ನೋಡುವುದನ್ನು ಸಹ ಈ ಶಾಲೆ ಒತ್ತಾಯಪೂರ್ವಕವಾಗಿ ಹೇರಿತ್ತು. ಹಲವು ಹಳೆಯ ವಿದ್ಯಾರ್ಥಿಗಳು ಟೀಕಿಸಿ ಪ್ರತ್ಯುತ್ತರ ನೀಡಿದ್ದಾರೆ. ಆಗ ಶಾಲೆ ಎಚ್ಚೆತ್ತುಕೊಂಡು, ಆ ಈಮೇಲ್ ಸರಿಯಾದ ತಪಾಸಣೆ ಇಲ್ಲದೆ ನಮ್ಮ ಸಂಪರ್ಕ ವಿಭಾಗದಿಂದ ರವಾನೆಯಾಗಿದೆ ಎಂದು ತಿಪ್ಪೆ ಸಾರಿಸುವ ಕೆಲಸ ಮಾಡಿದೆ. ಎನ್ ಎಚ್ ಪಿಎಸ್ ಗುಂಪು ಹಲವು ಶಾಲೆ, ಪದವಿಪೂರ್ವ ಕಾಲೇಜು, ಎರಡು ಪದವಿ ಕಾಲೇಜು ಮತ್ತು ಒಂದು ಎಂಜಿನಿಯರಿಂಗ್ ಕಾಲೇಜುಗಳನ್ನು ನಡೆಸುತ್ತಿದ್ದು, ಎಲ್ಲವೂ ಬೆಂಗಳೂರಿನಲ್ಲೇ ಇವೆ.


ಕಾಶ್ಮೀರ ಫೈಲ್ಸ್ ಸಿನಿಮಾ ನೋಡುವುದು ಸಿಬ್ಬಂದಿಗೆ ಕಡ್ಡಾಯ ಮಾಡಿದ್ದ ಈ ಶಾಲೆಯು ವಿದ್ಯಾರ್ಥಿಗಳನ್ನು ಸಿನಿಮಾಕ್ಕೆ ಪ್ರೇರೇಪಿಸಿ ಕಳುಹಿಸುವ ಕೆಲಸವನ್ನೂ ಮಾಡಿತ್ತು. ಈ ಸಂಬಂಧ ಎಲ್ಲ ಪೋಸ್ಟ್ ಗಳು ಇನ್ ಸ್ಟಾಗ್ರಾಮ್ ಮತ್ತು ಲಿಂಕ್ ಡೆನ್ ಗಳಲ್ಲಿ ಹಂಚಿಕೆಯಾಗಿವೆ. ಅದಕ್ಕೆ ಬಹಳಷ್ಟು ವಿದ್ಯಾರ್ಥಿಗಳು ಯಾಕೆ ಕಡ್ಡಾಯ ಮಾಡಲಾಗಿದೆ ಎಂದು ಪ್ರಶ್ನಿಸಿರುವುದು ಸಹ ಮೇಲ್ ನಲ್ಲಿ ನೋಡಲು ಸಿಗುತ್ತದೆ. ಹಲವರು ದಿಗ್ಭ್ರಮೆಗೊಂಡಿರುವುದಾಗಿ ತಿಳಿಸಿದ್ದಾರೆ.


ಅಯೋಧ್ಯೆಯಲ್ಲಿ ರಾಮ ಮಂದಿರ ಭೂಮಿ ಪೂಜೆ ನಡೆದ 2020ರ ಆಗಸ್ಟ್ 5ರಂದು ಈ ಶಾಲೆಯಲ್ಲೂ ಭೂಮಿ ಪೂಜೆ ಕಾರ್ಯಕ್ರಮ ನಡೆದಿತ್ತು. ಅದಕ್ಕೆ ವಿದ್ಯಾರ್ಥಿಗಳನ್ನು, ಹಳೆಯ ವಿದ್ಯಾರ್ಥಿಗಳನ್ನೆಲ್ಲ ಕರೆಯಲಾಗಿತ್ತು. ಅದೇ ವೇಳೆ ರಾಮ ಜನ್ಮಭೂಮಿ ಹೋರಾಟದ ಕಾಲ ಶೀರ್ಷಿಕೆ ವಿವರವನ್ನು ಈ ಶಾಲೆಯು ನಾನಾ ಜಾಲತಾಣ ಗುಂಪುಗಳ ಮೂಲಕ ಕಾಲಸೂಚಿ ಮಾಡಿ ಪ್ರಚಾರ ಮಾಡಿತ್ತು. ವಿಹಿಂಪ ಮತ್ತು ರಾಮ ಮಂದಿರ ಟ್ರಸ್ಟ್ ಗೂ ಈ ಶಾಲೆ ಮುಕ್ತವಾಗಿ ದೇಣಿಗೆ ನೀಡಿರುವುದು ಬಹಿರಂಗವಾಗಿ ಏನೂ ಉಳಿದಿಲ್ಲ.
ನ್ಯೂ ಹಾರಿಜನ್ ಗುಂಪು ಶಾಲೆಗಳ ಮಾಲಕ ಮತ್ತು ಚೇರ್ಮನ್ ಮೋಹನ್ ಮಂಗಾನಾನಿ. ಸ್ವಚ್ಛ ಭಾರತ ಅಭಿಯಾನಕ್ಕೆ ಪ್ರಧಾನಿ ಮೋದಿಯವರಿಗೆ ರೂ. 5 ಕೋಟಿ ಡೊನೇಶನ್ ನೀಡಿದ್ದು, ಅವರ ಜೊತೆ ಫೋಟೋ ಸಮೇತ ಎಲ್ಲ ಕಡೆ ಪ್ರಚಾರವಾಗಿದೆ.
ಶಾಲೆಯ ಸಾಮಾಜಿಕ ಕಾರ್ಯಗಳ ಪುಟದಲ್ಲಿ ರಾಮ ಮಂದಿರ ಟ್ರಸ್ಟ್ ಗೆ ಈ ಶಾಲೆಯು ರೂ. 5 ಕೋಟಿ ದೇಣಿಗೆ ನೀಡಿರುವುದನ್ನು ಪ್ರಕಟಿಸಲಾಗಿದೆ.


ಮತ್ತೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ 2020ರಲ್ಲಿ ರೂ. 5 ಕೋಟಿ ನೀಡಲಾಗಿದೆ. ವಿಶ್ವ ಹಿಂದೂ ಪರಿಷತ್ತಿಗೆ 2019ರಲ್ಲಿ 5 ಲಕ್ಷ ರೂಪಾಯಿ ಹಾಗೂ ಆಗಾಗ ದೇಣಿಗೆ ನೀಡಿರುವುದು ಕಂಡುಬರುತ್ತದೆ. 2021ರಲ್ಲಿ ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ಮುಕುಂದ ಸಿ. ಆರ್. ಹೆಸರಿಗೆ ದೊಡ್ಡ ಮೊತ್ತದ ಚೆಕ್ ನೀಡಲಾಗಿದೆ. ಬಲಪಂಥೀಯ ವಿಚಾರಧಾರೆಗಳ ಪ್ರಚಾರದಲ್ಲಿ ಈ ಶಾಲೆಯು ಶಿಕ್ಷಣಕ್ಕಿಂತ ಹೆಚ್ಚಿನ ಆಸಕ್ತಿಯನ್ನು ಹೊಂದಿದೆ. ಇದರ ನಡುವೆ ‘ ದಿಕ್ವಿಂಟ್’ ಅಂತರಜಾಲ ಮೂಲಕ ನ್ಯೂ ಹಾರಿಜನ್ ಶಾಲೆಯ ಪ್ರಿನ್ಸಿಪಾಲ್ ಮತ್ತು ಚೇರ್ಮನ್ ಮಂಗಾನಾನಿಯವರನ್ನು ಸಂಪರ್ಕಿಸಿದೆ. ಶಾಲೆಯಲ್ಲಿ ನಡೆಯುವ ಪಠ್ಯೇತರ ಚಟುವಟಿಕೆಗಳ ಬಗ್ಗೆ ಕೇಳಿದ ಯಾವುದಕ್ಕೂ ಇವರು ಉತ್ತರ ಕೊಡಲೊಲ್ಲರು. ಶಾಲೆಯ ಪಾಲುಗಾತಿಯಾದ ಚೇರ್ಮನ್ ಮಗಳು ಕೀರ್ತಿ ಮಂಗಾನಾನಿಯನ್ನೂ ಕ್ವಿಂಟ್ ಸಂಪರ್ಕಿಸಿತು. ಫೋನೆತ್ತಿದವರು, ಕೀರ್ತಿಯವರು ಆಮೇಲೆ ಕಾಲ್ ಮಾಡುತ್ತಾರೆ’ ಎಂದು ವರದಿಗಾರರಿಗೆ ಹೇಳಿದರಾದರೂ ಮತ್ತೆ ಕಾಲ್ ಬರಲೇ ಇಲ್ಲ.


ದಿನೇ ದಿನೇ ಈ ಶಾಲೆಯಲ್ಲಿ ಬಲಪಂಥೀಯ ಪ್ರಚಾರ ಹೆಚ್ಚಾಗುತ್ತಿದೆ ಎಂದು ಹಲವು ಹಳೆಯ, ಅನೇಕ ಹೊಸ ವಿದ್ಯಾರ್ಥಿಗಳು ದೂರಿದ್ದಾರೆ. “ನಾನು 2014ಕ್ಕೆ ಮೊದಲು ಇಲ್ಲಿ ಪದವಿ ಶಿಕ್ಷಣ ಪಡೆದೆ. ಆಗಲೂ ಶಾಲೆಯಲ್ಲಿ, ಕಲಿಕೆಯಲ್ಲಿ ಧಾರ್ಮಿಕತೆ ಬೆರೆತಿತ್ತಾದರೂ ಈ ರೀತಿಯ ಅತಿರೇಕಗಳೆಲ್ಲ ಇರಲಿಲ್ಲ. ಈಗ ಅತಿರೇಕದ ಪ್ರಚಾರ ಎಲ್ಲ ನಿಟ್ಟಿನಲ್ಲೂ ನಡೆದಿರುವುದನ್ನು ನಾವು ನೋಡುತ್ತಿದ್ದೇವೆ. ಹುಚ್ಚಾಟವೆಂದರೆ ಇವರ ಪ್ರಚಾರಕ್ಕೆ ವಿದ್ಯಾರ್ಥಿಗಳನ್ನು ಎಳೆಯುತ್ತಿರುವುದು ದುರಂತ ಎಂದು ಹಳೆಯ ವಿದ್ಯಾರ್ಥಿಯೊಬ್ಬರು ತಿಳಿಸಿದ್ದಾರೆ.


ಕಾಶ್ಮೀರ ಫೈಲ್ಸ್ ಕಡ್ಡಾಯ ವೀಕ್ಷಣೆಗೂ ಇಮೇಲ್

“ನೀವು ವಿದ್ಯಾರ್ಥಿಗಳು ಅರ್ಜುನ ಬಿಲ್ಗಾರರು. ಆದ್ದರಿಂದ ಅಧರ್ಮದ ವಿರುದ್ಧ ಎದ್ದು ನಿಲ್ಲುವುದರ ಬಗ್ಗೆ ನೀವೇ ತೀರ್ಮಾನ ಮಾಡಬೇಕು. ಶಾರದೆ ಇಲ್ಲವೇ ಸರಸ್ವತಿಯೆ ಶಾಲೆ. ಕಾಶ್ಮೀರಿ ಪಂಡಿತರು ಪುರಾತನ ಕಾಲದಿಂದ ಕಾದಿಟ್ಟಿದ್ದ ಜ್ಞಾನವನ್ನು ಕೊಲೆ ಮಾಡಲಾಗಿದೆ. ಈ ಚಲನಚಿತ್ರವು ವಿವರವಾಗಿ ಆ ಕೊಲೆಯನ್ನು ತೋರಿಸುತ್ತದೆ. ವಂದನೆಗಳು ವಿವೇಕ್ ಅಗ್ನಿಹೋತ್ರಿ. ಇಡೀ ಜಗತ್ತು ಇದನ್ನು ಗುರುತಿಸಬೇಕು ಎಂದು ನಾನು ಬಯಸುತ್ತೇನೆ” ಎಂದು ಶಾಲೆಯ ಪ್ರಿನ್ಸಿಪಾಲ್ ಅನುಪಮ್ ಸೇಥಿ ಈಮೇಲ್ ಮಾಡಿರುವುದು ಬೆಳಕಿಗೆ ಬಂದಿದೆ.



Join Whatsapp