ಹೊಸದಿಲ್ಲಿ: ದೆಹಲಿಯ ನೂತನ ಲೆಫ್ಟಿನೆಂಟ್ ಗವರ್ನರ್ ಆಗಿ ವಿನಯ್ ಕುಮಾರ್ ಸಕ್ಸೇನಾರನ್ನು ನೇಮಕ ಮಾಡಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಆದೇಶ ಹೊರಡಿಸಿದ್ದಾರೆ. 1958 ಮಾರ್ಚ್ 23, ರಂದು ಜನಿಸಿದ ವಿನಯ್ ಕುಮಾರ್ ಸಕ್ಸೇನಾ, ಇತ್ತೀಚಿನವರೆಗೂ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷರಾಗಿದ್ದರು.
ಹಲವು ವಿಷಯಗಳಲ್ಲಿ ದೆಹಲಿ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್, ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಕಳೆದ ವಾರ ರಾಜೀನಾಮೆ ಸಲ್ಲಿಸಿದ್ದರು. ಮೇ 23 ಸೋಮವಾರದಂದು ಅವರ ರಾಜೀನಾಮೆಯನ್ನು ರಾಷ್ಟ್ರಪತಿಗಳು ಅಂಗೀಕರಿಸಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, “ನಾನು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರೊಂದಿಗೆ ಹಲವಾರು ವಿಷಯಗಳಲ್ಲಿ ಕೆಲಸ ಮಾಡಿದ್ದೇನೆ ಮತ್ತು ದೆಹಲಿಯಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿದ್ದೇನೆ. ಅವರು ಬಹಳ ಒಳ್ಳೆಯ ವ್ಯಕ್ತಿ. ಅವರ ಉತ್ತಮ ಭವಿಷ್ಯಕ್ಕಾಗಿ ಶುಭ ಹಾರೈಸುತ್ತೇನೆ. ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಬಯಸುತ್ತೇನೆ.” ಎಂದಿದ್ದಾರೆ.
“ನೂತನವಾಗಿ ನೇಮಕಗೊಂಡ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರಿಗೆ ಆತ್ಮೀಯ ಸ್ವಾಗತವನ್ನು ಕೋರುತ್ತೇನೆ. ದೆಹಲಿಯ ಒಳಿತಿಗಾಗಿ ದೆಹಲಿ ಸರ್ಕಾರದ ಸಂಪುಟದಿಂದ ಸಂಪೂರ್ಣ ಸಹಕಾರ ಪಡೆಯಲಿದ್ದಾರೆ” ಎಂದು ಹೊಸದಾಗಿ ನೇಮಕಗೊಂಡ ದೆಹಲಿ ಎಲ್‌ಜಿಗೆ ದೆಹಲಿಯ ಜನತೆಯ ಪರವಾಗಿ ಕೇಜ್ರಿವಾಲ್ ಸ್ವಾಗತ ಕೋರಿದ್ದಾರೆ.