ದೆಹಲಿಗೆ ನೂತನ ಸಿಎಂ: ಯಾರು ಈ ಅತಿಶಿ ಮರ್ಲೆನಾ ಸಿಂಗ್?

Prasthutha|

ದೆಹಲಿ: ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಅತಿಶಿ ಮರ್ಲೆನಾ ಆಯ್ಕೆಯಾಗಿದ್ದಾರೆ. ಮಂಗಳವಾರ ಬೆಳಗ್ಗೆ ದೆಹಲಿಯ ಅರವಿಂದ್ ಕೇಜ್ರಿವಾಲ್ ಅವರ ಮನೆಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ, ಕೇಜ್ರಿವಾಲ್ ಅವರು ಸಿಎಂ ಸ್ಥಾನಕ್ಕೆ ಅತಿಶಿ ಹೆಸರನ್ನು ಪ್ರಸ್ತಾಪಿಸಿದರು.

- Advertisement -


ನರ್ಮದಾ ನೀರಿಗಾಗಿ ಉಪವಾಸ ನಡೆಸುವ ಮೂಲಕ ಗಮನ ಸೆಳೆದಿದ್ದ ಅತಿಶಿ, ಎಎಪಿ ಹಾಗೂ ಕೇಜ್ರಿವಾಲ್ಗೆ ಅಪಾಯ ಎದುರಾದಾಗಲೆಲ್ಲಾ ಅವರಿಗೆ ಬೆಂಬಲವಾಗಿ ನಿಂತು ವಿರೋಧಿಗಳ ದಾಳಿಗೆ ದಿಟ್ಟ ಉತ್ತರ ನೀಡಿದವರು. ಇದೀಗ ಇವರ ಹೆಸರನ್ನೇ ಹಾಲಿ ಮುಖ್ಯಮಂತ್ರಿ ಕೇಜ್ರಿವಾಲ್ ಪ್ರಸ್ತಾಪಿಸಿದ್ದಾರೆ. ಅವರ ಆಯ್ಕೆಗೆ ಶಾಸಕರು ಧನಿಗೂಡಿಸಿ ಬೆಂಬಲಿಸಿದ್ದಾರೆ.


ಯಾರು ಈ ಅತಿಶಿ ಮರ್ಲೆನಾ?
ಅತಿಶಿ ಅವರು 1981ರ ಜೂನ್ 8ರಂದು ದೆಹಲಿಯ ಸುಶಿಕ್ಷಿತ ಕುಟುಂಬದಲ್ಲಿ ಜನಿಸಿದವರು. ತಾಯಿ ತೃಪ್ತಾ ವಾಹಿ ಹಾಗೂ ತಂದೆ ವಿಜಯ್ ಸಿಂಗ್ ಇಬ್ಬರೂ ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು. ಅತಿಶಿ ಅವರು ಪ್ರವೀಣ್ ಸಿಂಗ್ ಅವರನ್ನು ವರಿಸಿದ್ದಾರೆ. ಅವರೂ ಶಿಕ್ಷಣ ತಜ್ಞ ಹಾಗೂ ಸಂಶೋಧಕ. ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಹಲವು ವರ್ಷಗಳಿಂದ ಈ ಜೋಡಿ ಜತೆಗೂಡಿ ಕೆಲಸ ಮಾಡಿದೆ.

- Advertisement -


ತಾವು ನಂಬಿಕೊಂಡು ಬಂದ ಸಿದ್ಧಾಂತದಿಂದಾಗಿ ಅತಿಶಿ ಅವರು ತಮ್ಮ ಮಧ್ಯದ ಹೆಸರನ್ನು ‘ಮರ್ಲೆನಾ’ ಎಂದು ಇಟ್ಟುಕೊಂಡಿದ್ದಾರೆ. ಇದು ಮಾರ್ಕ್ಸ್ ಹಾಗೂ ಲೆನಿನ್ ಹೆಸರುಗಳನ್ನು ಸೂಚಿಸುತ್ತದೆ. ತಮ್ಮ ಕೌಟುಂಬಿಕ ಹಿನ್ನೆಲೆಯಿಂದ ರಾಜಕೀಯಕ್ಕೆ ಧುಮುಕುವ ನಿರ್ಧಾರ ಮಾಡಿದ ನಂತರ ಸಾರ್ವಜನಿಕ ವಲಯದಲ್ಲಿ ಅವರು ‘ಅತಿಶಿ‘ ಎಂದೇ ಗುರುತಿಸಿಕೊಂಡಿದ್ದಾರೆ.


ಅತಿಶಿ ಅವರ ಶಾಲಾ ಶಿಕ್ಷಣ ದೆಹಲಿಯಲ್ಲೇ ನಡೆದಿದೆ. ಪುಸಾ ರಸ್ತೆಯ ಸ್ಪ್ರಿಂಗ್ ಡೇಲ್ಸ್ ಶಾಲೆಯಲ್ಲಿ ಪ್ರೌಢ ಶಿಕ್ಷಣ. ಪದವಿಯನ್ನು ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ 2001ರಲ್ಲಿ ಪೂರ್ಣಗೊಳಿಸಿದರು. ನಂತರ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಇದಕ್ಕಾಗಿ ಅವರು ಎರಡು ಶಿಷ್ಯವೇತನವನ್ನೂ ಪಡೆದಿದ್ದಾರೆ.


2013ರ ಜನವರಿಯಲ್ಲಿ ಅತಿಶಿ ಅವರು ಆಮ್ ಆದ್ಮಿ ಪಕ್ಷ ಸೇರಿದರು. ಎಎಪಿಯ ನೀತಿ ನಿರೂಪಣೆಯಲ್ಲಿ ಅತಿಶಿ ಪ್ರಮುಖ ಪಾತ್ರ ವಹಿಸಿದ್ದಾರೆ.


ಅತಿಶಿ ಮತ್ತು ದೆಹಲಿ ರಾಜಕೀಯ
2019ರ ಲೋಕಸಭಾ ಚುನಾವಣೆಯಲ್ಲಿ ಅತಿಶಿ ಅವರನ್ನು ಪೂರ್ವ ದೆಹಲಿಯ ಉಸ್ತುವಾರಿಯನ್ನಾಗಿ ಎಎಪಿ ನೇಮಿಸಿತು. ಚುನಾವಣೆಯನ್ನು ಎದುರಿಸಿದರೂ ಅಲ್ಲಿ ಪಕ್ಷಕ್ಕೆ ಸೋಲಾಯಿತು. ಗೌತಮ್ ಗಂಭೀರ್ ಅವರು 4.77 ಲಕ್ಷ ಮತಗಳಿಂದ ಜಯಗಳಿಸಿದರು. ಆದರೆ 2020ರ ದೆಹಲಿ ವಿಧಾನಸಭೆಗೆ ನಡೆದ ಚುನಾವಣೆ ಅತಿಶಿ ಪಾಲಿಗೆ ದೊಡ್ಡ ತಿರುವನ್ನು ನೀಡಿತು. ದಕ್ಷಿಣ ದೆಹಲಿಯ ಕಲ್ಕಜಿಯಿಂದ ಅವರು ಕಣಕ್ಕಿಳಿದಿದ್ದರು. ಬಿಜೆಪಿ ಅಭ್ಯರ್ಥಿ ಧರಮ್ಬೀರ್ ಸಿಂಗ್ ಅವರನ್ನು 11 ಸಾವಿರ ಮತಗಳಿಂದ ಪರಾಭಗೊಳಿಸಿದರು. ಇದರ ಜತೆಯಲ್ಲೇ ತಮ್ಮ ಕಾರ್ಯಗಳ ಮೂಲಕವೂ, ಅತಿಶಿ ದೆಹಲಿ ಸರ್ಕಾರದ ಪ್ರಮುಖ ಭಾಗವಾದರು.


ಈ ಗೆಲುವು ಅತಿಶಿಗೆ ಸಂಪುಟ ದರ್ಜೆ ಸಚಿವ ಸ್ಥಾನವನ್ನು ಗಿಟ್ಟಿಸಿಕೊಟ್ಟಿತು. ಅಬಕಾರಿ ನೀತಿ ಹಗರಣದಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಂಧನ ಹಾಗೂ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರ ರಾಜೀನಾಮೆಯಿಂದಾಗಿ ಅತಿಶಿ ಸರ್ಕಾರ ಹಾಗೂ ಪಕ್ಷ ಎರಡನ್ನೂ ನಿಭಾಯಿಸುವ ಜವಾಬ್ದಾರಿ ಹೊತ್ತುಕೊಂಡರು. 2022–23ರಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷೆಯಾಗಿದ್ದರು. ಇದರೊಂದಿಗೆ ಶಿಕ್ಷಣ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ, ಅಲ್ಪಸಂಖ್ಯಾತ ಇಲಾಖೆ ಸೇರಿದಂತೆ ಇನ್ನೂ ಹಲವು ಸಮಿತಿಗಳ ಉಸ್ತುವಾರಿ ಅತಿಶಿ ಹೆಗಲಿಗೆ ಬಿದ್ದಿತು.


ದೆಹಲಿಯ ನೂತನ ಸಿಎಂ ಅತಿಶಿಯ ಆಸ್ತಿ ಲೆಕ್ಕಾಚಾರ
ಅತಿಶಿ ಅವರ ಅಫಿಡವಿಟ್ ಪ್ರಕಾರ, ಆಕೆಯ ಆಸ್ತಿ ಮೌಲ್ಯ 1.41 ಕೋಟಿ ರೂ. ಆಕೆಯ ಅಫಿಡವಿಟ್ ಪ್ರಕಾರ ಆಕೆಯ ಆಸ್ತಿಯ ಒಟ್ಟು ಮೌಲ್ಯವು 1,20,12,824 ರೂ ಆಗಿದ್ದರೆ, ಆಕೆಯ ಆಸ್ತಿಗಳ ಒಟ್ಟು ಮೊತ್ತವು 1,25,12,823 ರೂ. ಆಗಿದೆ.


ಶೈಕ್ಷಣಿಕ ಹಿನ್ನಲೆ
ಅತಿಶಿ ಉತ್ತಮ ಶೈಕ್ಷಣಿಕ ಅರ್ಹತೆ ಹೊಂದಿದ್ದಾರೆ. ಅವರು ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಇತಿಹಾಸವನ್ನು ಅಧ್ಯಯನ ಮಾಡಿದ್ದು ದೆಹಲಿ ವಿಶ್ವವಿದ್ಯಾಲಯದಲ್ಲಿ ಟಾಪರ್ ಆಗಿದ್ದರು. ಅವರು ಚೆವೆನಿಂಗ್ ವಿದ್ಯಾರ್ಥಿವೇತನದಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. 2006 ರಲ್ಲಿ ರೋಡ್ಸ್ ವಿದ್ವಾಂಸರಾಗಿ ಆಕ್ಸ್ ಫರ್ಡ್ ನಿಂದ ಶೈಕ್ಷಣಿಕ ಸಂಶೋಧನೆಯಲ್ಲಿ ಎರಡನೇ ಸ್ನಾತಕೋತ್ತರ ಪದವಿಯನ್ನು ಪಡೆದರು.



Join Whatsapp