ಅಬುದಾಬಿ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಮತ್ತು ಯುಎಇ- ಅರಬ್ ಅಮೀರರ ಗಣರಾಜ್ಯದ ಅಧ್ಯಕ್ಷ ಶೇಖ್ ಮುಹಮ್ಮದ್ ಬಿನ್ ಜಾಯೇದ್ ಅಲ್ ನಹ್ಯಾನ್ ಅವರು ಮಂಗಳವಾರ ಫೋನ್ ನಲ್ಲಿ ಎರಡೂ ದೇಶಗಳ ನಡುವಣ ಸಂಬಂಧದ ಬಗ್ಗೆ ಮಾತುಕತೆ ನಡೆಸಿದರು.
“ಇಬ್ಬರು ನಾಯಕರ ಸ್ನೇಹಮಯ ಮಾತುಕತೆಯಲ್ಲಿ ಯುಎಇ- ಇಸ್ರೇಲ್ ನಡುವಣ ಚಾರಿತ್ರಿಕ ಶಾಂತಿ ಮಾತುಕತೆಯನ್ನು ಮುಂದುವರಿಸುವ ಒತ್ತಾಸೆ ಇತ್ತು. ಇನ್ನಷ್ಟು ವಿಸ್ತೃತ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಆಸಕ್ತಿ ಪ್ರಕಟವಾಯಿತು” ಎಂದು ನೇತನ್ಯಾಹು ಕಚೇರಿಯು ಟ್ವೀಟ್ ಮಾಡಿದೆ.
ನೇತನ್ಯಾಹು ಅವರಿಂದ ಫೋನ್ ಕರೆ ಬಂದಿತ್ತು; ಜಾಯೇದ್ ಸ್ವೀಕರಿಸಿದರು. ಪರಸ್ಪರ ಸಂಬಂಧವನ್ನು ಇಸ್ರೇಲ್ ಜೊತೆಗೆ ಸೌಹಾರ್ದಯುತವಾಗಿ ಮುನ್ನಡೆಸುವ ವಿಷಯ ಚರ್ಚೆಯಾಯಿತು ಎಂದು ಎಮಿರೇಟ್ ಸ್ಟೇಟ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಜಾಯೇದ್ ಮತ್ತು ನೇತನ್ಯಾಹು ಅವರು ತಮ್ಮ ಮಾತುಕತೆಯನ್ನು ಮುಂದುವರಿಸುವ ಒಪ್ಪಂದಕ್ಕೆ ಬಂದರು ಎಂದು ಡಬ್ಲ್ಯುಎನ್’ಎ ವರದಿ ಮಾಡಿದೆ.
ಏಪ್ರಿಲ್ 1ರಂದು ಇಸ್ರೇಲ್ ಮತ್ತು ಯುಎಇ ನಡುವೆ ಒಂದು ಸಮಗ್ರ ವ್ಯಾಪಾರ ಮತ್ತು ಆರ್ಥಿಕ ಒಪ್ಪಂದವಾಯಿತು. ದಶಕದ ಅಂತ್ಯದೊಳಗೆ ವ್ಯಾಪಾರ ವ್ಯವಾಹಾರವನ್ನು 10 ಬಿಲಿಯ ಡಾಲರ್ ದಾಟಿಸುವ ಗುರಿಯನ್ನು ಎರಡೂ ದೇಶಗಳು ಪ್ರಕಟಿಸಿವೆ.
ಸಂಬಂಧವನ್ನು ಸಹಜಗೊಳಿಸಲು 2020ರಲ್ಲಿ ಯುಎಸ್’ಎ ಪ್ರಾಯೋಜಿತ ಒಪ್ಪಂದವೊಂದು ಇಸ್ರೇಲ್ ಮತ್ತು ಯುಎಇ ನಡುವೆ ಆಗಿತ್ತು. ಅಂದಿನಿಂದ ಎರಡೂ ದೇಶಗಳ ಹಿರಿಯ ಅಧಿಕಾರಿಗಳು ಪರಸ್ಪರ ಸಂಚರಿಸುತ್ತ ಹಲವು ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಿರುವರು.