ನೇತಾಜಿ ಸಾವರ್ಕರ್‌ನನ್ನು ವಿರೋಧಿಸಿದ್ದರು, ತಪ್ಪು ಇತಿಹಾಸ ಬೇಡ: ನಟ ಹೂಡಾಗೆ ಪಾಠ ಮಾಡಿದ ನೇತಾಜಿ ಕುಟುಂಬ

Prasthutha|

ಹೊಸದಿಲ್ಲಿ: ‘ಸ್ವಾತಂತ್ರ್ಯ ವೀರ್ ಸಾವರ್ಕರ್’  ಚಿತ್ರದ ನಟ ರಣದೀಪ್ ಹೂಡಾ ಅವರು, ನೇತಾಜಿ ಸುಭಾಶ್ ಚಂದ್ರ ಬೋಸ್ ಅವರಿಗೂ ಸಾವರ್ಕರ್ ಪ್ರೇರಣೆಯಾಗಿದ್ದರು ಎಂದು ಟ್ವೀಟ್ ಮಾಡಿದ್ದು, ವಿವಾದಕ್ಕೆ ಕಾರಣವಾಗಿದೆ.

- Advertisement -

ರಣದೀಪ್ ಹೂಡಾ ಅವರು ತಮ್ಮ ಸಿನಿಮಾದ ಪ್ರಚಾರದ ಗಿಮಿಕ್‌ಗಾಗಿ ಟ್ವೀಟ್ ಮಾಡಿದ್ದಾರೆ. ವಾಸ್ತವದಲ್ಲಿ ಸುಭಾಶಚಂದ್ರ ಬೋಸ್ ಅವರು ಸಾವರ್ಕರ್ ಅವರನ್ನು ವಿರೋಧಿಸಿದ್ದರು. ಅವರೊಬ್ಬ ಜಾತ್ಯತೀತ ನಾಯಕರಾಗಿದ್ದರು ಎಂದು ಬೋಸ್ ಅವರ ಮರಿ ಮೊಮ್ಮಗ ಅವರು ಹೇಳಿದ್ದಾರೆ.

ರಣದೀಪ್ ಹೂಡಾ ಏನೆಂದು ಟ್ವೀಟ್ ಮಾಡಿದ್ದರು?

- Advertisement -

ಸಾವರ್ಕರ್ ಜಯಂತಿಯ ಹಿನ್ನೆಲೆಯಲ್ಲಿ ರಣದೀಪ್ ಹೂಡಾ ಅವರು, ಸ್ವಾತಂತ್ರ್ಯ ವೀರ್ ಸಾವರ್ಕರ್ ಸಿನಿಮಾದ ಪೋಸ್ಟರ್ ಲಾಂಚ್ ಮಾಡಿದ್ದರು. ಈ ವೇಳೆ ಟ್ವೀಟ್ ಮಾಡಿದ್ದ ಹೂಡಾ ಅವರು, ಬ್ರಿಟಿಷರ್‌ರಿಂದ ಮೋಸ್ಟ್ ವಾಂಟೆಡ್ ಆಗಿದ್ದ ಸಾವರ್ಕರ್ ಅವರು ಸುಭಾಶ್ ಚಂದ್ರ ಬೋಸ್, ಭಗತ್ ಸಿಂಗ್ ಮತ್ತು ಖುದಿರಾಮ್ ಬೋಸ್ ಅವರಂಥ ಕ್ರಾಂತಿಕಾರಿಗಳ ಹಿಂದಿರುವ ಪ್ರೇರಣೆಯಾಗಿದ್ದರು. ವೀರ್ ಸಾವರ್ಕರ್ ಯಾರು? ಸತ್ಯ ಕಥೆಯ ಅನಾವರಣಗೊಳ್ಳಲಿದೆ. ರಣದೀಪ್ ಹೂಡಾ ಅವರು ಈ ಸಿನಿಮಾದಲ್ಲಿ ಸ್ವಾತಂತ್ರ್ಯವೀರ್ ಸಾವರ್ಕರ್ ಆಗಿ ನಟಿಸಿದ್ದಾರೆ. ಸಿನಿಮಾ 2023ರಲ್ಲಿ ತೆರೆ ಕಾಣಲಿದೆ ಎಂದು ಹೇಳಿದ್ದರು.

ಸಾವರ್ಕರ್‌ ಮತ್ತು ನೇತಾಜಿ ವಿಚಾರಧಾರೆ ತದ್ವಿರುದ್ಧವಾಗಿದ್ದವು

ರಣದೀಪ್ ಹೂಡಾ ಅವರ ಟ್ವೀಟ್‌ಗೆ ಖಾರವಾಗಿ ಪ್ರತಿಕ್ರಿಯಿಸಿರುವ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಮರಿ ಮೊಮ್ಮಗ ಚಂದ್ರ ಕುಮಾರ್ ಬೋಸ್ ಅವರು, “ಸಾವರ್ಕರ್ ಅವರನ್ನು ನೇತಾಜಿ ವಿರೋಧಿಸಿದ್ದರು. ಅವರೊಬ್ಬ ಜಾತ್ಯತೀತ ನಾಯಕರಾಗಿದ್ದರು. ಹೂಡಾ ಹೇಳುತ್ತಿರುವುದು ಕೇವಲ ಪ್ರಚಾರದ ಗಿಮಿಕ್ ಆಗಿದೆ” ಎಂದು ಹೇಳಿದ್ದಾರೆ.

ನೇತಾಜಿ ಅವರು ಕೇವಲ ಇಬ್ಬರಿಂದ ಪ್ರೇರಣೆ ಪಡೆದಿದ್ದರು. ಒಬ್ಬರು ಸ್ವಾಮಿ ವಿವೇಕಾನಂದರು. ಅವರು ಅಧ್ಯಾತ್ಮದ ಗುರು. ಮತ್ತೊಬ್ಬರು ಸ್ವಾತಂತ್ರ್ಯ ಹೋರಾಟಗಾರ ದೇಶಬಂಧು ಚಿತ್ತರಂಜನ್ ದಾಸ್. ಇವರು ಬೋಸ್ ರಾಜಕೀಯ ಮಾರ್ಗದರ್ಶಕರಾಗಿದ್ದರು. ಈ ಇಬ್ಬರ ಹೊರತಾಗಿ ನೇತಾಜಿ ಅವರಿಗೆ ಇತರ ಯಾವುದೇ ಸ್ವಾತಂತ್ರ್ಯ ಹೋರಾಟಗಾರರಿಂದ ಪ್ರೇರಣೆಯಾಗಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಸಾವರ್ಕರ್ ಅವರ ವಿಚಾರಧಾರೆ ಮತ್ತು ನೇತಾಜಿ ಅವರ ಸಿದ್ಧಾಂತ ತ್ವದಿರುದ್ಧಗಳಾಗಿವೆ. ಹಾಗಾಗಿ, ಸಾವರ್ಕರ್ ತತ್ವ ಮತ್ತು ಸಿದ್ಧಾಂತವನ್ನು ನೇತಾಜಿ ಅವರು ಅನುಸರಿಸಲು ನನಗೇ ಯಾವುದೇ ಕಾರಣಗಳು ಕಾಣುತ್ತಿಲ್ಲ. ವಾಸ್ತವದಲ್ಲಿ ನೇತಾಜಿ ಅವರು ಸಾವರ್ಕರ್ ಅವರನ್ನು ವಿರೋಧಿಸಿದ್ದರು ಎಂದು ಹೇಳಿದ್ದಾರೆ.



Join Whatsapp