ಯಲಹಂಕದಲ್ಲಿ ಅಭಿವೃದ್ಧಿ ವಿಚಾರದಲ್ಲಿ ನಿರ್ದಿಷ್ಟ ಒಂದು ಸಮುದಾಯದ ನಿರ್ಲಕ್ಷ್ಯ: ಎಚ್ ಡಿ ಕೆ ಆರೋಪ

Prasthutha|

ಬೆಂಗಳೂರು: ಸರ್ವ ಜನಾಂಗವನ್ನು ಸಮಭಾವದಿಂದ ಕಾಣುತ್ತಿದ್ದ ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರಿನ ಯಲಹಂಕದಲ್ಲಿ ಅಭಿವೃದ್ಧಿ ವಿಚಾರದಲ್ಲಿ ನಿರ್ದಿಷ್ಟ ಒಂದು ಸಮುದಾಯವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
ಮಳೆಯಿಂದ ಹಾನಿಗೆ ತುತ್ತಾಗಿರುವ ಪ್ರದೇಶಗಳಿಗೆ ಎರಡು ದಿನಗಳಿಂದ ಭೇಟಿ ನೀಡುತ್ತಿರುವ ಅವರು, ಇಂದು ಬ್ಯಾಟರಾಯನಪುರ, ಹೆಬ್ಬಾಳ ಮತ್ತು ಯಲಹಂಕ ವಿಧಾನಸಭೆ ಕ್ಷೇತ್ರಗಳಿಗೆ ಭೇಟಿ ನೀಡಿದಾಗ ಅವರಿಗೆ ರಿಪಬ್ಲಿಕ್ ಆಫ್ ಯಲಹಂಕದ ದರ್ಶನವಾಯಿತು.
ಯಲಹಂಕದ ಕೇಂದ್ರೀಯ ಅಪಾರ್ಟ್ ಮೆಂಟ್ ಆವರಣಕ್ಕೆ ಭೇಟಿ ನೀಡಿ ಮಳೆ ಹಾನಿ ವೀಕ್ಷಣೆ ಮಾಡುವ ವೇಳೆ ನೈಜ ಸಂತ್ರಸ್ತ ಜನರೇ ಅಹವಾಲು ಹೇಳಿಕೊಳ್ಳಲು ಮುಂದೆ ಬಾರದೇ ಇರುವುದನ್ನು ಮಾಜಿ ಮುಖ್ಯಮಂತ್ರಿಗಳ ಗಮನಕ್ಕೆ ಬಂದಿತು.
ಅದಾದ ಮೇಲೆ ಯಲಹಂಕ ಕ್ಷೇತ್ರದ ಚಿಕ್ಕಬೆಟ್ಟಹಳ್ಳಿಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿಗಳನ್ನು ಡಾಂಬರು ಇಲ್ಲದ ರಸ್ತೆಗಳು, ವಿದ್ಯುತ್ ದೀಪಗಳು ಇಲ್ಲದ ಬೀದಿಗಳು ಹಾಗೂ ಯಾವುದೇ ಬಗೆಯ ಮೂಲ ಸೌಕರ್ಯವೂ ಇಲ್ಲದ ಪ್ರದೇಶಗಳು ಎದುರಾದವು.
ಇಡೀ ಬಡಾವಣೆಯನ್ನು ಒಂದು ಸುತ್ತು ಹಾಕಿದ ನಂತರ ಅಲ್ಲಿನ ಸಮಸ್ಯೆಗಳು ಹಾಗೂ ಸ್ಥಳೀಯ ಶಾಸಕರು ನಿರಂತರವಾಗಿ ನಿರ್ಲಕ್ಷ್ಯ ತೋರಿರುವ ಅಂಶ ಅವರ ಗಮನಕ್ಕೆ ಬಂತು. ಸಿಲಿಕಾನ್ ಸಿಟಿಯಲ್ಲಿ ಅತಿ ನಿರ್ಲಕ್ಷ್ಯಕ್ಕೆ ಒಳಪಟ್ಟ ಪ್ರದೇಶ ಇದಾಗಿದ್ದು, ರಾಜ್ಯ ಸರಕಾರದ ಮತ್ತು ಶಾಸಕರ ಕಾರ್ಯ ವೈಖರಿಯನ್ನು ಕಟುವಾಗಿ ಟೀಕಿಸಿದರು.
ಹೆಬ್ಬಾಳ, ಯಲಹಂಕ ಹಾಗೂ ಬ್ಯಾಟರಾಯನಪುರಕ್ಕೆ ಭೇಟಿ ಕೊಟ್ಟಿದ್ದೇನೆ. ಬ್ಯಾಟರಾಯನಪುರದಲ್ಲಿ ಕೆಲ ಪ್ರದೇಶಗಳನ್ನು ಕಂಡು ನನಗೆ ಬಹಳ ಆಶ್ಚರ್ಯ ಆಗಿದೆ. ಕನಿಷ್ಠ ಮೂಲಸೌಕರ್ಯವೂ ಇದುವರೆಗೂ ಜನರಿಗೆ ದೊರಕಿಲ್ಲ. ಯಲಹಂಕದಲ್ಲಿ ಒಂದು ಸಮಾಜದ ಜನರು ಹೆಚ್ಚಾಗಿರುವ ಚಿಕ್ಕಬೆಟ್ಟಹಳ್ಳಿಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಇಲ್ಲಿ ರಸ್ತೆಗಳಿಗೆ ಡಾಂಬರು, ಬೀದಿಗಳಿಗೆ ವಿದ್ಯುತ್ ದೀಪ ಸೇರಿ ಯಾವ ಅನುಕೂಲವೂ ಇಲ್ಲ.
ಮುಖ್ಯ ಬೀದಿಯಲ್ಲಿ ಅಲ್ಲೊಂದು ಇಲ್ಲೊಂದು ಬೀದಿ ದೀಪ ಕಾಣುತ್ತಿದೆ. ಸಣ್ಣಪುಟ್ಟ ಬೀದಿಗಳಲ್ಲಿ ಜನ ಕತ್ತಲಲ್ಲೇ ಸಂಚಾರ ಮಾಡಬೇಕಿದೆ. ಸ್ಟ್ರೀಟ್ ಲೈಟ್ ಕೂಡ ಹಾಕಿಲ್ಲ. ಚುನಾವಣೆಯಲ್ಲಿ ಈ ಜನ ಮತ ಕೊಡಲಿಲ್ಲ ಅಂತ ಯಲಹಂಕದಲ್ಲಿ ಈ ಪ್ರದೇಶಕ್ಕೆ ಯಾವುದೇ ಕೆಲಸ ಮಾಡಿಕೊತ್ತಿಲ್ಲ. ಇಷ್ಟೊಂದು ಕೀಳು ಮಟ್ಟದ ರಾಜಕಾರಣ ಮಾಡಬಾರದು. ನಾನೆಂದೂ, ಎಲ್ಲಿಯೂ ಇಂಥ ರಾಜಕೀಯ ನೋಡಿಲ್ಲ. ಅವರು ದ್ರೋಹಿಗಳು, ಇವರು ದ್ರೋಹಿಗಳು ಎಂದು ಹೇಳುವ ಈ ಜನರು ಅಭಿವೃದ್ಧಿಯಲ್ಲಿ ತಾರತಮ್ಯ ಮಾಡುತ್ತಿರುವುದೇ ದೊಡ್ಡ ದೇಶದ್ರೋಹ. ಇದಕ್ಕಿತ ಕೆಟ್ಟ ರಾಜಕೀಯ ಮತ್ತೊಂದಿಲ್ಲ ಎಂದು ಬಿಜೆಪಿ ಹಾಗೂ ಯಲಹಂಕ ಶಾಸಕರ ವಿರುದ್ಧ ಹರಿಹಾಯ್ದರು.
ಇಲ್ಲಿನ ನಾಗರೀಕರು ತೆರಿಗೆ ಕಟ್ಟುತ್ತಾರೆ. ಆದರೂ ಇವರಿಗೆ ಕನಿಷ್ಟ ಮೂಲ ಸೌಕರ್ಯವೂ ಇಲ್ಲ ಎಂದರೆ ಅದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದು ಇಲ್ಲ ಎಂದು ಅವರು ಹೇಳಿದರು.
ಜನರನ್ನು ಶಾಸಕರು ಹೆದರಿಸುತ್ತಾರೆ!:
ಕೋಗಿಲು ಕ್ರಾಸ್ ಅಪಾರ್ಟ್ಮೆಂಟ್ ವೀಕ್ಷಣೆ ಮಾಡಲು ಹೋದರೆ ಅಲ್ಲಿನ ಜನರನ್ನು ಶಾಸಕರು ಮತ್ತವರ ಪಟಾಲಂ ಹೇದರಿಸುತ್ತಾರಂತೆ. ಈ ಬಗ್ಗೆ ನನಗೆ ಮಾಹಿತಿ ಬಂದಿದೆ. ಯಾರಾದ್ರೂ ನನ್ನನ್ನು ಭೇಟಿಯಾದರೆ ಅಪಾರ್ಟ್ಮೆಂಟ್ ಅನ್ನೇ ನೆಲಸಮ ಮಾಡಿಸುತ್ತೇವೆ ಎಂದು ಧಮ್ಕಿ ಹಾಕುತ್ತಾರಂತೆ. ಈ ರೀತಿಯ ರಾಜಕಾರಣ ಎಷ್ಟು ದಿನ ನಡೆಯುತ್ತೇ? ಎಂದು ಮಾಜಿ ಮುಖ್ಯಮಂತ್ರಿಗಳು ಆಕ್ರೋಶ ವ್ಯಕ್ತಪಡಿಸಿದರು.
ಮೂಲ ಸೌಕರ್ಯ ಸಮಸ್ಯೆ ಬಗೆಹರಿಸಿಲ್ಲ ಅಂದರೆ ಇನ್ ಪ್ರತಿಭಟನೆ ಮಾಡಬೇಕಾಗುತ್ತದೆ. ನಾನೇ ಬಂದು ಇಲ್ಲಿ ಪ್ರತಿಭಟನೆಗೆ ಕೂರಬೇಕಾಗುತ್ತದೆ. ಚಿಕ್ಕಬೆಟ್ಟಹಳ್ಳಿ ಜನರ ಸಮಸ್ಯೆ ಬಗೆಹರಿಯದಿದ್ದರೆ ಜನರ ಪರವಾಗಿ ನಾನೇ ಬೀದಿಗೆ ಇಳಿಯುತ್ತೇನೆ ಎಂದು ಅವರು ಎಚ್ಚರಿಕೆ ನೀಡಿದರು.
ನಾಳೆಯೂ ನಗರ ಸಂಚಾರ:
ಕೆ.ಆರ್ ಪುರಂ, ಅರ್ ಆರ್ ನಗರದಲ್ಲಿ ನಾಳೆ ವೀಕ್ಷಣೆ ಮಾಡುತ್ತೇನೆ. ಯೋಜನೆಗಳಿಗೆ ಕೊಟ್ಟ ಹಣ ದುರ್ಬಳಕೆ ಆಗುತ್ತಿದೆ. ಸಣ್ಣಪುಟ್ಟ ಕೂಲಿ ಕಾರ್ಮಿಕರು ಟ್ಯಾಕ್ಸ್ ಕಟ್ಟುತ್ತಿದ್ದಾರೆ. ಅವರಿಗೆ ದ್ರೋಹ ಮಾಡುವ ಕೆಲಸ ಮಾಡಬಾರದು. ಎಸ್ ಎಂ ಕೃಷ್ಣ ಅವರು ಬೆಂಗಳೂರು ಬ್ರ್ಯಾಂಡ್ ಉಳಿಸಿಕೊಳ್ಳಲು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಆದರೆ, ಇಲ್ಲಿ ಅವರು ಇರುವ ಪಕ್ಷದ ಶಾಸಕರೇ ನಿರ್ದಿಷ್ಟ ಸಮುದಾಯ ಜನರನ್ನು ಟಾರ್ಗೆಟ್ ಮಾಡುತ್ತಾ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.
ಎಸಿಬಿ ದಾಳಿ; ಅಶೋಕ್ ಗೆ ಕುಟುಕಿದ ಹೆಚ್ ಡಿಕೆ:

- Advertisement -

ನಗರದಲ್ಲಿ ಇಂದು ನಗರ ಜಿಲ್ಲಾಧಿಕಾರಿ ಹಾಗೂ ವಿಶೇಷ ಜಿಲ್ಲಾಧಿಕಾರಿಗಳ ಕಚೇರಿಗಳ ಮೇಲೆ ಎಸಿಬಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿಗಳು, ಕಂದಾಯ ಸಚಿವ ಅಶೋಕ್ ಅವರಿಗೆ ಚಾಟಿ ಬೀಸಿದರು.
ಕಂದಾಯ ಸಚಿವರೇ ನಿಮ್ಮ ಜಿಲ್ಲಾಧಿಕಾರಿ ಕಚೇರಿಯಲ್ಲಿ ಏನ್ ನಡೀತಿದೆ ನೋಡಿ. ನಿಮ್ಮ ಇಲಾಖೆಯ ಕರ್ಮಕಾಂಡವನ್ನು. ಐದು ಲಕ್ಷ ಭ್ರಷ್ಟಾಚಾರದ ಹಣವನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ ಎಂದು ಚುಚ್ಚಿದರು.
ಸೋಮಣ್ಣ ಅವರೇ ನನಗೆ ಸಲಹೆ ಕೊಡ್ತಿಯಲ್ಲಪ್ಪ? ಸೋಮಣ್ಣ ನೋಡಪ್ಪ.. ಲೂಟಿ, ದರೋಡೆ ನೋಡಲು ಚಂಬಲ್ ಕಣಿವೆಗೆ ಅಥವಾ ಬಿಹಾರಕ್ಕೆ ಹೋಗಬೇಕಿಲ್ಲ. ಬೆಂಗಳೂರಿನಲ್ಲೇ ನೋಡಬಹುದು. ಅದಕ್ಕೂ ಮೀರಿ ಇಲ್ಲಿ ಜನರ ದುಡ್ಡನ್ನು ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯರಾದ ಟಿ.ಎ.ಶರವಣ, ರಮೇಶ್ ಗೌಡ, ಜೆಡಿಎಸ್ ನಗರ ಅಧ್ಯಕ್ಷ ಆರ್. ಪ್ರಕಾಶ್, ಯಲಹಂಕ ಜೆಡಿಎಸ್ ಅಧ್ಯಕ್ಷ ಕೃಷ್ಣಪ್ಪ ಹಾಗೂ ಸ್ಥಳೀಯ ಜೆಡಿಎಸ್ ಮುಖಂಡರು ಹಾಜರಿದ್ದರು.



Join Whatsapp