ಮಂಗಳೂರು: ಕಾಂಗ್ರೆಸ್ ಪಕ್ಷದ ದಕ್ಷಿಣ ಕನ್ನ ಡ ಉಡುಪಿ ಸ್ಥಳೀಯ ಸಂಸ್ಥೆ ಉಪಚುನಾವಣೆ ಉಸ್ತುವಾರಿ ಸಮಿತಿಯಲ್ಲಿ ಅಲ್ಪಸಂಖ್ಯಾತರ ಕಡೆಗಣನೆ ವಿಚಾರವಾಗಿ ದ.ಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ. ಸ್ಪಷ್ಟೀಕರಣ ನೀಡಿದ್ದಾರೆ.
ದಕ್ಷಿಣ ಕನ್ನಡ ಉಡುಪಿ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಕ್ಷೇತ್ರದ ಉಪಚುನಾವಣೆ ಸಂಬಂಧ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಯ್ಕೆ ಮತ್ತು ಅಗತ್ಯ ಚುನವಣಾ ತಂತ್ರಗಳನ್ನು ರೂಪಿಸುವ ಸಲುವಾಗಿ ಪಕ್ಷದ ಹಿರಿಯ ನಾಯಕರನ್ನು ಒಳಗೊಂಡ ‘ದಕ್ಷಿ ಣ ಕನ್ನ ಡ ಉಡುಪಿ ಸ್ಥಳೀಯ ಸಂಸ್ಥೆ ಉಪಚುನಾವಣೆ ಉಸ್ತುವಾರಿ ಸಮಿತಿ’ಯನ್ನು ಕೆಪಿಸಿಸಿ ಅಧ್ಯಕ್ಷರು ರಚಿಸಿದ್ದಾರೆ. ಈ ಸಮಿತಿಯಲ್ಲಿ ಅಲ್ಪಸಂಖ್ಯಾತರನ್ನು ಕಡೆಗಣಿಸಲಾಗಿದೆ ಎಂಬ ಅಪಸ್ವರಗಳು ಕೇಳಿಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ವಿಚಾರದಲ್ಲಿ ನಾವು ಕೆಪಿಸಿಸಿ ನಾಯಕರನ್ನು ಸಂಪರ್ಕಿಸಿದಾಗ ಆಗಿರುವ ಪ್ರಮಾದವನ್ನು ಸರಿಪಡಿಸುವುದಾಗಿ ಅವರು ನಮಗೆ ಭರವಸೆ ನೀಡಿದ್ದಾರೆ. ಶೀಘ್ರದಲ್ಲೇ ಸಮಿತಿಯನ್ನು ಪರಿಷ್ಕರಣೆ ಮಾಡಿ ಉಭಯ ಜಿಲ್ಲೆಯ ಇಬ್ಬರು ಅಲ್ಪಸಂಖ್ಯಾತರಿಗೆ ಅವಕಾಶ ನೀಡುವುದಾಗಿ ಭರವಸೆ ನೀಡಿರುತ್ತಾರೆ ಎಂದು ಶಾಹುಲ್ ಹಮೀದ್ ತಿಳಿಸಿದ್ದಾರೆ.
ಈ ಸಮಿತಿ ರಚನೆ ವೇಳೆ ಅಲ್ಪಸಂಖ್ಯಾತರನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗಿಲ್ಲ. ತುರ್ತಾಗಿ ಈ ಸಮಿತಿ ರಚನೆ ಮಾಡಿರುವುದರಿಂದ ಅಚಾತುರ್ಯ ಮತ್ತು ಕಣ್ತಪ್ಪಿನಿಂದ ಅಲ್ಪಸಂಖ್ಯಾತರ ಹೆಸರು ಬಿಟ್ಟುಹೋಗಿದೆಯೇ ಹೊರತು ಅಲ್ಪಸಂಖ್ಯಾತ ಮುಖಂಡರನ್ನು ಕಡೆಗಣಿಸಲಾಗಿಲ್ಲ. ಕಾಂಗ್ರೆಸ್ ಪಕ್ಷದ ವಿರೋಧಿಗಳು ಈ ಬಗ್ಗೆ ಆರೋಪ ಮತ್ತು ಅಪಪ್ರಚಾರ ಮಾಡುತ್ತಿದ್ದಾರೆ. ಕೆಲವು ಕಾಂಗ್ರೆಸಿಗರು ಮಾಹಿತಿಯ ಕೊರತೆಯಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವು ಮಂದಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮಂಜುನಾಥ್ ಭಂಡಾರಿ ವಿರುದ್ಧವೂ ಆರೋಪ ಮಾಡಿದ್ದಾರೆ. ಈ ಸಮಿತಿ ರಚನೆಯಲ್ಲಿ ಮಂಜುನಾಥ್ ಭಂಡಾರಿಯವರ ಯಾವ ಪಾತ್ರವೂ ಇರುವುದಿಲ್ಲ. ಈ ಸಮಿತಿ ರಚನೆ ಮಾಡಿರುವುದು ಕೆಪಿಸಿಸಿ ಅಧ್ಯಕ್ಷರು. ಮಂಜುನಾಥ್ ಭಂಡಾರಿ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳೆಲ್ಲವೂ ಸುಳ್ಳು.
ಕಾಂಗ್ರೆಸ್ ಪಕ್ಷ ಸದಾ ಅಲ್ಪಸಂಖ್ಯಾತರ ಪರವಾಗಿ ನಿಂತ ಇತಿಹಾಸ ಹೊಂದಿದೆ. ಕಾಂಗ್ರೆಸ್ ಪಕ್ಷ ಎಂದಿಗೂ ಅಲ್ಪಸಂಖ್ಯಾತರನ್ನು ಕಡೆಗಣನೆ ಮಾಡಿರುವುದಿಲ್ಲ. ಈ ಸಮಿತಿಯಲ್ಲಿ ಆಗಿರುವ ಪ್ರಮಾದವನ್ನು ಪಕ್ಷ ಶೀಘ್ರದಲ್ಲೇ ಸರಿಪಡಿಸಲಿದೆ. ಅಲ್ಪಸಂಖ್ಯಾತರಿಗೂ ಅವಕಾಶ ನೀಡಲಿದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.