ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಗೆ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿ ಡಾ.ರಾಜ್ ಕುಮಾರ್ ಸೇನೆ ಕಾರ್ಯಕರ್ತರು ಶುಕ್ರವಾರ ಸದಾಶಿವ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದರು.
ಕಳೆದ ಶುಕ್ರವಾರ 11.30ರ ಸುಮಾರಿಗೆ ಪುನೀತ್ ರಾಜ್ ಕುಮಾರ್ ಅವರನ್ನು ರಮಣರಾವ್ ಅವರ ಕ್ಲಿನಿಕ್ ಗೆ ಕರೆತರಲಾಯಿತಾದರೂ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡಲಿಲ್ಲ. ತುಂಬಾ ಹೊತ್ತಿನ ಬಳಿಕ 7-8 ಕಿ.ಮೀ,ದೂರದಲ್ಲಿರುವ ವಿಕ್ರಂ ಆಸ್ಪತ್ರೆಗೆ ಕಳುಹಿಸಿದ್ದಾರೆ. ಏಕೆಂದರೆ ರಮಣರಾವ್ ಅವರ ಪುತ್ರ ವಿಕಂ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂಬ ಒಂದೇ ಕಾರಣಕ್ಕೆ ಟ್ರಾಫಿಕ್ ನಡುವೆ ಪುನೀತ್ ಅವರನ್ನು ಕಳುಹಿಸಲಾಗಿದೆ. ಕನಿಷ್ಠ ಆಂಬುಲೆನ್ಸ್ ಮೂಲಕವೂ ಕಳುಹಿಸಿಲ್ಲ. ಅಮೂಲ್ಯ ಸಮಯವಾದ ಸುಮಾರು 20 -25 ನಿಮಿಷಗಳನ್ನು ಹೀಗೆ ವ್ಯರ್ಥ ಮಾಡಲಾಯಿತು.
ರಮಣ ಕ್ಲಿನಿಕ್ ಸಮೀಪವೇ ಎಂ.ಎಸ್ ರಾಮಯ್ಯ, ಮತ್ತಿತರ ಪ್ರಸಿದ್ಧ ಆಸ್ಪತ್ರೆಗಳಿದ್ದರೂ ಅಷ್ಟು ದೂರದ ವಿಕ್ರಂ ಆಸ್ಪತ್ರೆಗೆ ಕಳುಹಿಸಿ ಸಮಯ ವ್ಯರ್ಥ ಮಾಡಿದ್ದಾರೆ. ಇವೆಲ್ಲವೂ ವೃತ್ತಿಯಲ್ಲಿನ ಸ್ಪರ್ಧೆಗಾಗಿ ನಡೆಸಲಾಗಿದೆ. ಇದರಿಂದ ಕರ್ನಾಟಕದ ಅಮೂಲ್ಯ ಜೀವವೊಂದನ್ನು ನಾವು ಕಳೆದುಕೊಳ್ಳುವಂತಾಯಿತು. ಆದ್ದರಿಂದ ನಿರ್ಲಕ್ಷ್ಯ ವಹಿಸಿದ ಡಾ.ರಮಣರಾವ್ ಅವರನ್ನು ಬಂಧಿಸಬೇಕು. ಅವರ ಕ್ಲಿನಿಕ್ ಅನ್ನು ಮುಚ್ಚಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಅವರು ಎಚ್ಚರಿಸಿದರು.
ಬಳಿಕ ಸದಾಶಿವ ನಗರ ಪೊಲೀಸರಿಗೆ ಮನವಿ ಪತ್ರ ಸಲ್ಲಿಸಲಾಯಿತು.