ಟೋಕಿಯೊ ಒಲಿಂಪಿಕ್ಸ್ ಚಿನ್ನದ ಹುಡುಗ, ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ, ಡೈಮಂಡ್ ಲೀಗ್ ಕೂಟದಲ್ಲಿ ಮೊದಲ ಬಾರಿಗೆ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ನಡೆದ ಲೀಗ್‌ನಲ್ಲಿ 89.94 ಮೀಟರ್ ಜಾವೆಲಿನ್ ಎಸೆದ ಚೋಪ್ರಾ, 2ನೇ ಸ್ಥಾನ ಪಡೆದರು. ಆ ಮೂಲಕ ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಮತ್ತಷ್ಟು ಉತ್ತಮಪಡಿಸಿಕೊಂಡಿದ್ದಾರೆ. ಗ್ರೆನಡಾದ ಆಂಡರ್ಸನ್ ಪೀಟರ್ಸ್, 90.31 ಮೀಟರ್ ಎಸೆತದೊಂದಿಗೆ ಚಿನ್ನದ ಪದಕ ಗೆದ್ದರು.
ಇತ್ತೀಚೆಗಷ್ಟೇ ಫಿನ್‌ಲ್ಯಾಂಡ್‌ನಲ್ಲಿ ನಡೆದಿದ್ದ ಪಾವೋ ನೂರ್ಮಿ ಗೇಮ್ಸ್‌ನಲ್ಲಿ 89.30 ಮೀಟರ್ ದೂರಕ್ಕೆ ಜಾವೆಲಿನ್ ಎಸೆದಿದ್ದ ನೀರಜ್ ಚೋಪ್ರಾ, ಆ ಕೂಟದಲ್ಲೂ ಬೆಳ್ಳಿ ಪದಕ ಗೆದ್ದಿದ್ದರು. ಆ ಮೂಲಕ 2021ರ ಮಾರ್ಚ್ ತಿಂಗಳಿನಲ್ಲಿ ತಾವೇ ನಿರ್ಮಿಸಿದ್ದ 87.58 ಮೀಟರ್ ದೂರದ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದರು. ಮತ್ತೊಂದೆಡೆ ಪ್ರಸಕ್ತ ವರ್ಷದ ಐದನೇ ಅತಿದೂರದ ಜಾವೆಲಿನ್ ಥ್ರೋ ಎಂಬ ದಾಖಲೆಯೂ ಚೋಪ್ರಾ ಪಾಲಾಗಿತ್ತು. ಇದೀಗ ತಮ್ಮದೇ ದಾಖಲೆಯ ದೂರವನ್ನು ಅವರು 89.94 ಮೀಟರ್‌ಗೆ ವಿಸ್ತರಿಸಿದ್ದಾರೆ.
ಪಾವೋ ನೂರ್ಮಿ ಗೇಮ್ಸ್ ಬೆನ್ನಲ್ಲೇ ನಡೆದ ಕುವೋರ್ತಾನ್ ಗೇಮ್ಸ್‌ನ ಮೊದಲ ಸುತ್ತಿನಲ್ಲೇ 86.69 ದೂರಕ್ಕೆ ಜಾವೆಲಿನ್ ಎಸೆದಿದ್ದ ನೀರಜ್ ಚೋಪ್ರಾ, ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು. ಆದರೆ 3ನೇ ಪ್ರಯತ್ನದ ಓಟದ ವೇಳೆ ಎಡವಿ ಬಿದ್ದ ಚೋಪ್ರಾ ಎಡಭುಜಕ್ಕೆ ಗಾಯವಾಗಿತ್ತು. ಮಳೆಯಿಂದಾಗಿ ಒದ್ದೆಯಾಗಿದ್ದ ಟರ್ಫ್‌ನಲ್ಲಿ ಚೋಪ್ರಾ ಜಾರಿದ್ದರು. ಗಾಯದ ಕಾರಣದಿಂದಾಗಿ ‘ಸ್ಟಾಕ್‌ಹೋಮ್ ಡೈಮಂಡ್ ಲೀಗ್ʼನಲ್ಲಿ ಭಾಗವಹಿಸುವುದು ಅನುಮಾನವಾಗಿತ್ತು. ಆದರೆ ಗಾಯವನ್ನು ಗಂಭೀರವಾಗಿ ಪರಿಗಣಿಸದ ಒಲಿಂಪಿಯನ್ ಚೋಪ್ರಾ, ದಾಖಲೆಯೊಂದಿಗೆ ಬೆಳ್ಳಿ ಪದಕ ಗೆದ್ದಿದ್ದಾರೆ.