ಅಘಾಡಿ ಸರ್ಕಾರದಲ್ಲಿ ಮುಖ್ಯಮಂತ್ರಿ ಸ್ಥಾನದ ಆಸೆ ವ್ಯಕ್ತಪಡಿಸಿದ ಎನ್ ಸಿಪಿ

Prasthutha|

ಮುಂಬೈ: ಮುಂದಿನ ಮಹಾರಾಷ್ಟ್ರ ವಿಕಾಸ ಅಘಾಡಿ- ಎಂವಿಎ ಸರಕಾರದಲ್ಲಿ ಎನ್ ಸಿಪಿಯವರು ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಮಹಾರಾಷ್ಟ್ರದ ಎನ್ ಸಿಪಿ ಸಚಿವ ಧನಂಜಯ ಮುಂಡೆ ಹೇಳಿದ್ದಾರೆ. ಬೀಡ್ ನಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಶಿವಸೇನೆ, ಕಾಂಗ್ರೆಸ್, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಸರಕಾರವಿದೆ. ಎನ್ ಸಿಪಿ ಅಗ್ರ ನಾಯಕ ಶರದ್ ಪವಾರ್ ಅವರು ಶಿವಸೇನೆ ಜೊತೆಗೆ ಹೊಸ ರಾಜಕೀಯ ನಡೆಸಿದ್ದಾರೆ ಎಂದು ಕೆಲವರು ಅಂದಾಜಿಸಿದ್ದಾರೆ. 83ರ ಪ್ರಾಯದ ಶರದ್ ಪವಾರ್ ಅವರು ಶಿವಸೇನೆಯ ಉದ್ಧವ್ ಠಾಕ್ರೆ ನೇತೃತ್ವದ ಸರಕಾರದಲ್ಲಿ ನಾನು ಕೈ ಹಾಕುವ ಪ್ರಶ್ನೆಯೇ ಇಲ್ಲ ಎಂದು ಹೇಳುತ್ತಲೇ ಬಂದಿದ್ದಾರೆ.

- Advertisement -


ಅನಂತರ ಪವಾರ್ ಅವರ ಪುತ್ರಿ, ಸಂಸದೆ ಸುಪ್ರಿಯಾ ಸುಳೆಯವರು “ಇದರಲ್ಲಿ ಹೊಸದೇನೂ ಇಲ್ಲ. ಮೈತ್ರಿ ಸರಕಾರದ ಎಲ್ಲ ಅಂಗ ಪಕ್ಷಗಳೂ ಮುಖ್ಯಮಂತ್ರಿ ಆಗಲು ಬಯಸುತ್ತವೆ. ಅದು ಆಗಿಯೇ ಆಗುತ್ತದೆ ಎಂದೇನೂ ಇಲ್ಲ. ಇನ್ನೂ ಚುನಾವಣೆಗೆ ಎರಡಕ್ಕೂ ಹೆಚ್ಚು ವರುಷ ಕಾಲ ಇದೆ” ಎಂದರು.


2019ರ ಚುನಾವಣೆಯಲ್ಲಿ ಬಿಜೆಪಿ 288ರಲ್ಲಿ 105 ಸ್ಥಾನ ಗೆದ್ದಿತ್ತು. ಶಿವಸೇನೆ 56 ಗೆದ್ದಿತ್ತು. ಶಿವಸೇನೆಯು 54 ಸ್ಥಾನ ಗೆದ್ದಿದ್ದ ಎನ್ ಸಿಪಿ ಮತ್ತು 44 ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಜೊತೆ ಸೇರಿ ಮೈತ್ರಿ ಸರಕಾರ ರಚಿಸಿತು. ಬಿಜೆಪಿ ಮೊದಲು ಸರಕಾರ ರಚಿಸಿದರೂ ಬಹುಮತ ಸಾಬೀತು ಮಾಡಲು ಸಾಧ್ಯವಾಗಿರಲಿಲ್ಲ. ಉದ್ಧವ್ ಠಾಕ್ರೆ ಮಂತ್ರಿ ಮಂಡಲದಲ್ಲಿ 12 ಸಂಪುಟ ದರ್ಜೆ ಮತ್ತು 4 ರಾಜ್ಯ ದರ್ಜೆಯ ಸಚಿವ ಸ್ಥಾನದೊಂದಿಗೆ ಎನ್ ಸಿಪಿ ಅತಿ ಹೆಚ್ಚು ಸಚಿವರನ್ನು ಹೊಂದಿದೆ. ಶಿವಸೇನೆಯು 10 ಸಂಪುಟ ದರ್ಜೆ ಮತ್ತು 4 ರಾಜ್ಯ ಮಂತ್ರಿಗಳನ್ನು ಪಡೆದಿದೆ. ಕಾಂಗ್ರೆಸ್ ಪಾಲು 10 ಸಂಪುಟ ಮತ್ತು 2 ರಾಜ್ಯ ಸಚಿವರದು. ಎನ್ ಸಿಪಿಗೆ ಪ್ರಮುಖ ಗೃಹ, ಹಣಕಾಸು ಖಾತೆಗಳನ್ನು ನೀಡಿ ಐದು ವರುಷವೂ ಉದ್ಧವ್ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಈಗಾಗಲೇ ತೀರ್ಮಾನವಾಗಿದೆ.

- Advertisement -


ಎನ್ ಸಿಪಿಯ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಅವರು ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಉದ್ಧವ್ ಅವರು ಇರುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಾಟೋಳೆಯವರು, ಶಿವಸೇನೆಯು ಕಾಂಗ್ರೆಸ್ಸನ್ನು ಕಡೆಗಣಿಸಿದೆ ಎಂದರೂ, ಸೋನಿಯಾ ಗಾಂಧಿಯವರದೇ ಅಂತಿಮ ತೀರ್ಮಾನ ಎಂದಿದ್ದಾರೆ. ಇತ್ತೀಚೆಗೆ ಗೋಂಡಿಯಾ ಜಿಲ್ಲಾ ಪರಿಷತ್ ನಲ್ಲಿ ಅಧಿಕಾರ ಹಿಡಿಯಲು ಎನ್ ಸಿಪಿಯು ಕಾಂಗ್ರೆಸ್ಸನ್ನು ಬದಿಗಿಟ್ಟು ಬಿಜೆಪಿ ಜೊತೆ ಸೇರಿದ್ದನ್ನು ಸಹ ಪಾಟೋಳೆ ಖಂಡಿಸಿದ್ದಾರೆ.


ಕಾಂಗ್ರೆಸ್ಸನ್ನು ದುರ್ಬಲಗೊಳಿಸಿದರೆ ಅದರ ಲಾಭ ತನಗೆ ಎಂದು ಎನ್ ಸಿಪಿ ಲೆಕ್ಕ ಹಾಕಿದೆ. ಮುಂದಿನ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಸಾಧ್ಯವಾದರೆ ಮುಖ್ಯಮಂತ್ರಿಗಿರಿ ತನ್ನ ಪಕ್ಷಕ್ಕೇ ಎಂಬ ದೂರದ ಗುರಿಯನ್ನು ಎನ್ ಸಿಪಿ ಇಟ್ಟುಕೊಂಡಿದೆ ಎಂದು ಪಾಟೋಳೆ ಹೇಳುತ್ತಾರೆ. 2024ರ ಚುನಾವಣೆಯಲ್ಲಿ 100+ ಸ್ಥಾನ ಗೆದ್ದರೆ ಮುಖ್ಯಮಂತ್ರಿಗಿರಿ ಕಟ್ಟಿಟ್ಟ ಬುತ್ತಿ ಎಂಬುದು ಎನ್ ಸಿಪಿಯ ಲೆಕ್ಕಾಚಾರ. ಆದರೆ ಈಗಿನ ಪರಿಸ್ಥಿತಿಯಲ್ಲಿ ಎನ್ ಸಿಪಿ ಅಷ್ಟು ಬೆಳೆಯುವ ಸೂಚನೆ ಇಲ್ಲ. ರಾಜಕೀಯ ಪಕ್ಷಗಳು ಗುರಿ ಮತ್ತು ಆಸೆ ಇಟ್ಟುಕೊಳ್ಳುವುದು ತಪ್ಪಲ್ಲ. ಆದರೆ ಮಹಾರಾಷ್ಟ್ರ ವಿಕಾಸ ಅಘಾಡಿಯ ಮೈತ್ರಿ ಮುರಿಯುವ ಕೆಲಸ ಎನ್ ಸಿಪಿ ಮಾಡುತ್ತಿದೆಯೇ ಎಂಬ ಅನುಮಾನ ಕೆಲವರದು. ಉದ್ಧವ್ ಠಾಕ್ರೆಯವರು ಮೈತ್ರಿ ಮುಂದಿನ ಚುನಾವಣೆಯಲ್ಲೂ ಉಳಿಯಬೇಕು ಎನ್ನುತ್ತಾರೆ. ಚುನಾವಣಾ ಸ್ಪರ್ಧೆ ಪ್ರತ್ಯೇಕವಾಗಿ, ಸರಕಾರ ರಚಿನೆ ಮಾತ್ರ ಒಟ್ಟಾಗಿ ಎಂಬ ನೀತಿಯೂ ಅದರದಾಗಿದೆ.

Join Whatsapp