ನವದೆಹಲಿ: ತಬ್ಲೀಗ್ ಜಮಾಅತ್ ಧಾರ್ಮಿಕ ಕಾರ್ಯಕ್ರಮವನ್ನ ಹೊಣೆಯಾಗಿಸಿ ಮುಸ್ಲಿಮರ ವಿರುದ್ಧ ದ್ವೇಷ ಬಿತ್ತುವ ಕಾರ್ಯಕ್ರಮ ಪ್ರಸಾರ ಮಾಡಿದ್ದ ಕನ್ನಡದ ಎರಡು ಖಾಸಗಿ ಸುದ್ದಿ ಚಾನೆಲ್ ಗಳಿಗೆ ರಾಷ್ಟ್ರೀಯ ವಾರ್ತಾ ಪ್ರಸಾರ ನಿಯಮಗಳ ಪ್ರಾಧಿಕಾರ (NBSA) ದಂಡ ವಿಧಿಸಿದೆ. ಹಾಗೂ ಆಂಗ್ಲ ಮಾಧ್ಯಮ ಸುದ್ದಿ ವಾಹಿನಿಗೆ ಛೀಮಾರಿ ಹಾಕಿದೆ.
ದೆಹಲಿಯ ನಿಝಾಮುದ್ದೀನ್ ಪ್ರದೇಶದಲ್ಲಿ ಕಳೆದ ಮಾರ್ಚ್ ತಿಂಗಳಿನಲ್ಲಿ ನಡೆದಿದ್ದ ಸಾವಿರಾರು ಮಂದಿ ಭಾಗವಹಿಸಿದ್ದರು. ಇದನ್ನೇ ಗುರಿಯಾಗಿಸಿ ಕೋವಿಡ್ ಸೋಂಕು ಹರಡಿದ್ದಾಗಿ ಕನ್ನಡದ ಹಲವು ಚಾನೆಲ್ ಗಳು ಸುದ್ದಿ ಪ್ರಸಾರ ಮಾಡಿತ್ತು. ಅದರಲ್ಲೂ ನ್ಯೂಸ್ 18 ಕನ್ನಡ ಹಾಗೂ ಏಷ್ಯಾನೆಟ್ ‘ಸುವರ್ಣ ನ್ಯೂಸ್’ ದ್ವೇಷ ಬಿತ್ತುವ ರೀತಿಯಲ್ಲಿ ವರದಿ ಪ್ರಸಾರ ಮಾಡಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿದ NBSA ʼನ್ಯೂಸ್ 18 ಕನ್ನಡʼ ವಾಹಿನಿಗೆ ಒಂದು ಲಕ್ಷ ರೂ. ಹಾಗೂ ʼಸುವರ್ಣ ನ್ಯೂಸ್ʼಗೆ ರೂ 50,000 ದಂಡ ವಿಧಿಸಿದೆ. ಅಲ್ಲದೆ ಘಟನೆ ವರದಿ ಮಾಡಿದ್ದಕ್ಕಾಗಿ ʼಟೈಮ್ಸ್ ನೌʼ ಇಂಗ್ಲಿಷ್ ಸುದ್ದಿ ವಾಹಿನಿಗೆ ಅದು ಛೀಮಾರಿ ಹಾಕಿದೆ.
ʼನ್ಯೂಸ್ 18 ಕನ್ನಡʼದ ಕೆಲವು ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದ ವಿಧಾನ ಹೆಚ್ಚು ಆಕ್ಷೇಪಾರ್ಹ ಹಾಗೂ ಕಪೋಲಕಲ್ಪಿತವಾಗಿದ್ದವು ಎಂದು ಎನ್‌ಬಿಎಸ್‌ಎ ತೀರ್ಪು ನೀಡಿದೆ. ʼದೆಹಲಿಯ ನಿಜಾಮುದ್ದೀನ್ ಮರ್ಕಜ್ ಹೇಗೆ ರಾಷ್ಟ್ರಕ್ಕೆ ಕೊರೊನಾ ವೈರಸ್ ಹರಡುತ್ತಿದೆ ಎಂಬುದು ನಿಮಗೆ ತಿಳಿದಿದೆಯೇ?ʼ, ‘ಕರ್ನಾಟಕದಿಂದ ದೆಹಲಿಯ ಜಮಾತ್ ಸಭೆಗೆ ಎಷ್ಟು ಮಂದಿ ಹೋಗಿದ್ದಾರೆ?’ ಎಂಬ ಶೀರ್ಷಿಕೆಯಡಿಯಲ್ಲಿ ವಾಹಿನಿ 2020ರ ಏಪ್ರಿಲ್ 1ರಂದು ಕಾರ್ಯಕ್ರಮ ಪ್ರಸಾರ ಮಾಡಿತು.
“ಕಾರ್ಯಕ್ರಮಗಳ ಧ್ವನಿ, ಧಾಟಿ ಹಾಗೂ ಭಾಷೆಯು ಮೌಢ್ಯ, ಪೂರ್ವಾಗ್ರಹ ಮತ್ತು ಅಗೌರವದಿಂದ ಕೂಡಿತ್ತು. ಕಾರ್ಯಕ್ರಮಗಳು ಪೂರ್ವಾಗ್ರಹ ಪೀಡಿತ, ಪ್ರಚೋದನಕಾರಿ ಮತ್ತು ಧಾರ್ಮಿಕ ಗುಂಪಿನ ಭಾವನೆಗಳ ಬಗ್ಗೆ ಕಾಳಜಿ ವಹಿಸದೆ ಉತ್ತಮ ಅಭಿರುಚಿಯ ಎಲ್ಲಾ ಗಡಿಗಳನ್ನು ದಾಟಿದವು. ಇದು ಸಮುದಾಯಗಳ ನಡುವೆ ದ್ವೇಷ ಬಿತ್ತುವ ಮತ್ತು ಪ್ರಚೋದಿಸುವ ಗುರಿಹೊಂದಿತ್ತು” ಎಂದು ಎನ್‌ಬಿಎಸ್ಎ ತನ್ನ ಆದೇಶದಲ್ಲಿ ತಿಳಿಸಿದೆ. ವಾಹಿನಿಗೆ ರೂ. 1ಲಕ್ಷ ದಂಡ ವಿಧಿಸಿರುವುದಷ್ಟೇ ಅಲ್ಲದೆ ಪ್ರಾಧಿಕಾರ ಜೂನ್ 23ರಂದು ರಾತ್ರಿ 9 ಗಂಟೆಗೆ ಪ್ರಸಾರವಾಗುವ ಸುದ್ದಿಗೆ ಮುಂಚಿತವಾಗಿ ಕ್ಷಮಾಪಣೆಯನ್ನು ಪ್ರಸಾರ ಮಾಡುವಂತೆ ನಿರ್ದೇಶನ ನೀಡಿತು.
ಸುವರ್ಣ ನ್ಯೂಸ್‌ಗೆ ಸಂಬಂಧಿಸಿದಂತೆ ಆದೇಶ ನೀಡುವಾಗ ಪ್ರಾಧಿಕಾರ “2020ರ ಮಾರ್ಚ್ 31 ಮತ್ತು ಏಪ್ರಿಲ್ 4ರ ನಡುವೆ ಪ್ರಸಾರವಾದ ಆರು ಕಾರ್ಯಕ್ರಮಗಳಲ್ಲಿ ವಸ್ತುನಿಷ್ಠತೆ ಮತ್ತು ನಿಷ್ಪಕ್ಷಪಾತತೆ ಕಂಡುಬಂದಿಲ್ಲ ಮತ್ತು ಧರ್ಮವೊಂದರ ವಿರುದ್ಧ ಅದು ಪೂರ್ವಾಗ್ರಹ ಪೀಡಿತವಾಗಿದೆ” ಎಂದು ಹೇಳಿದೆ.
“ಕಾರ್ಯಕ್ರಮ ಶೀರ್ಷಿಕೆಗಳು ಕೋಮು ಹಿಂಸಾಚಾರವನ್ನು ಪ್ರಚೋದಿಸುವ ಕೃತ್ರಿಮ ಪರಿಣಾಮ ಹೊಂದಿವೆ” ಎಂದು ಎನ್‌ಬಿಎಸ್‌ಎ ಅಭಿಪ್ರಾಯಪಟ್ಟಿದೆ.
ʼಟೈಮ್ಸ್ ನೌʼ ವರದಿಗೆ ಸಂಬಂಧಿಸಿದಂತೆ ಪ್ರಾಧಿಕಾರ “ಸುದ್ದಿವಾಹಿನಿ ಪ್ರಸಾರ ಮಾಡಿದ ʼಈಸ್ ತಬ್ಲೀಗಿ ಜಮಾತ್ ವಿಲ್‌ಫುಲೀ ಸಬೋಟೇಜಿಂಗ್ ಇಂಡಿಯಾ?” ಕಾರ್ಯಕ್ರಮದ ಅನೇಕ ದೃಶ್ಯಗಳು ನಿರೂಪಕರು ನೀಡಿದ ಹೇಳಿಕೆಗಳನ್ನು ದೃಢೀಕರಿಸಿಲ್ಲ ಎಂದಿತು. “ನಿರೂಪಕರ ಧಾಟಿ ಮತ್ತು ಪದಗಳನ್ನು ತಪ್ಪಿಸಬಹುದಿತ್ತು” ಎಂದು ಅದು ಹೇಳಿದೆ.