ನವೆಂಬರ್ 7 ರಂದು ವಿದ್ಯುತ್ ಖಾಸಗೀಕರಣದ ವಿರುದ್ಧ ದೇಶಾದ್ಯಂತ‌ ಪ್ರತಿಭಟನೆ

Prasthutha|

ಮಂಗಳೂರು: ಎಲ್ಲಾ ಕೈಗಾರಿಕೆಗಳ ತಾಯಿ ಮತ್ತು ಆಧುನಿಕ ನಾಗರಿಕ ಸಮಾಜದ ಕೇಂದ್ರ ನರಮಂಡಲದಂತೆ ಕೆಲಸ ನಿರ್ವಹಿಸುವ ಅತ್ಯಂತ ಪ್ರಮುಖ ಸೇವೆಯಾಗಿರುವುದು ವಿದ್ಯುತ್ ಕ್ಷೇತ್ರ. ಇದನ್ನೇ ಖಾಸಗೀಕರಣ ಮಾಡಲು ಹೊರಟಿರುವ ಜನವಿರೋಧಿ ಕೇಂದ್ರ ಸರಕಾರದ ನೀತಿಗಳ ವಿರುದ್ಧ ನವೆಂಬರ್ 7ರಂದು ದೇಶಾದ್ಯಂತ ವಿದ್ಯುತ್ ಇಲಾಖೆ ಕಚೇರಿಗಳ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 10 ಗಂಟೆಗೆ ದ.ಕ. ಜಿಲ್ಲೆಯ ಎಲ್ಲಾ ಮೆಸ್ಕಾಂ ಕಚೇರಿಗಳ ಎದುರು ಪ್ರತಿಭಟನೆ ನಡೆಯಲಿದೆ ಎಂದು ರೈತ ಕಾರ್ಮಿಕ ಹಾಗೂ ಜನಪರ ಸಂಘಟನೆಗಳ ಜಂಟಿ ವೇದಿಕೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

- Advertisement -

ಅತ್ಯಂತ ಲಾಭದಾಯಕವಾದ ವಿದ್ಯುತ್ ಕ್ಷೇತ್ರದ ಮೇಲೆ ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೇರಿದ ಕೂಡಲೇ ಕಣ್ಣಿಟ್ಟಿದ್ದು, ವಿದ್ಯುತ್ ಕ್ಷೇತ್ರದಲ್ಲಿನ ಉತ್ಪಾದನೆ, ವಿತರಣೆ ಎಲ್ಲವನ್ನೂ ಖಾಸಗೀಯವರಿಗೆ ವಹಿಸಬೇಕೆಂದು ಕೇಂದ್ರ ಸರಕಾರದ ಅಡಿಯಲ್ಲಿರುವ ನೀತಿ ಆಯೋಗ ಸ್ಪಷ್ಟಪಡಿಸಿದೆ. ಅದರಂತೆ ಹಂತಹಂತವಾಗಿ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಕ್ಕೆ ಸಿಲುಕುವಂತೆ ವಿದ್ಯುತ್ ಮಸೂದೆಗೆ ತಿದ್ದುಪಡಿಯನ್ನು ಮಾಡಿದೆ. ಇದರಿಂದಾಗಿ ವಿದ್ಯುತ್ ದರ ವಿಪರೀತವಾಗಿ ಹೆಚ್ಚಲಿದ್ದು, ಪ್ರತೀ ಮನೆಗೆ 8000 ರೂ.ಮೌಲ್ಯದ ಫ್ರೀ ಪೇಯ್ಡ್ ಸ್ಮಾರ್ಟ್ ಮೀಟರ್ ನ್ನು ಅಳವಡಿಸಿ ದಿನಕ್ಕೆ ವಿವಿಧ ಹಂತದ ದರಗಳನ್ನು ನಿಗದಿ ಪಡಿಸಿ ಜನಸಾಮಾನ್ಯರನ್ನು ದೋಚಲು ಕಾರ್ಪೊರೇಟ್ ಕಂಪೆನಿಗಳಿಗೆ ಗ್ರೀನ್ ಸಿಗ್ನಲ್ ನೀಡಿದೆ. ಅಲ್ಲದೆ, ಪ್ರತ್ಯೇಕ ಪೋಲಿಸ್ ವ್ಯವಸ್ಥೆ ಮಾಡಿ ಜನತೆಯ ಮೇಲೆ ದಬ್ಬಾಳಿಕೆ, ಮಾನಸಿಕ ಹಿಂಸೆಯನ್ನು ನೀಡುವ ಹುನ್ನಾರವಿದೆ. ಕೇಂದ್ರ ಸರಕಾರದ ಈ ಜನದ್ರೋಹಿ ಕೃತ್ಯದಿಂದ ವಿದ್ಯುತ್ ಕ್ಷೇತ್ರವನ್ನು ರಕ್ಷಿಸಬೇಕಾಗಿದೆ. ಆದ್ದರಿಂದ ನವೆಂಬರ್ 7 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಬಿಜೈಯಲ್ಲಿರುವ ಮೆಸ್ಕಾಂ ಪ್ರಧಾನ ಕಛೇರಿಯೆದುರು ನಡೆಯಲಿರುವ ಪ್ರತಿಭಟನೆಯಲ್ಲಿ ಸಾರ್ವಜನಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಜಂಟಿ ವೇದಿಕೆಯ ಪ್ರಧಾನ ಸಂಚಾಲಕ ಸುನಿಲ್ ಕುಮಾರ್ ಬಜಾಲ್ ಮನವಿ ಮಾಡಿದ್ದಾರೆ.



Join Whatsapp