ರಾಷ್ಟ್ರೀಯ ಯುವಜನೋತ್ಸವದ ಲೋಗೋ, ಮಾಸ್ಕಾಟ್ ಬಿಡುಗಡೆ

Prasthutha|

ಬೆಂಗಳೂರು: ಹುಬ್ಬಳ್ಳಿ – ಧಾರವಾಡದಲ್ಲಿ ಜನವರಿ 12 ರಿಂದ 16 ರವರೆಗೆ ನಡೆಯಲಿರುವ ರಾಷ್ಟ್ರೀಯ ಯುವ ಜನೋತ್ಸವಕ್ಕಾಗಿ ಆಕರ್ಷಕ ಲೋಗೋ, ಮಾಸ್ಕಾಟ್ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಬಿಡುಗಡೆ ಮಾಡಿದರು.

- Advertisement -


ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೆಹಲಿಯಿಂದ ಕೇಂದ್ರ ಯುವಜನ ಮತ್ತು ಕ್ರೀಡೆ, ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಸಿಂಗ್ ಠಾಕೂರ್ ವರ್ಚುವಲ್ ಮೂಲಕ ಪಾಲ್ಗೊಂಡರು. ಏಕ ಕಾಲಕ್ಕೆ ಹುಬ್ಬಳ್ಳಿಯಿಂದ ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ, ಕೈಮಗ್ಗ ಮತ್ತು ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಸಹ ವರ್ಚುವಲ್ ಮೂಲಕ ಭಾಗಿಯಾಗಿದ್ದರು.


ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ, ಹಿರಿಯ ಚಿತ್ರನಟಿ ತಾರಾ ಅನುರಾಧ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ ಪ್ರಸಾದ್, ಯುವ ಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಮತ್ತಿತರರು ಉಪಸ್ಥಿತರಿದ್ದರು.
ಬಸವರಾಜ ಬೊಮ್ಮಾಯಿ ಮಾತನಾಡಿ, ರಾಷ್ಟ್ರೀಯ ಯುವ ಜನೋತ್ಸವವನ್ನು ಅದ್ದೂರಿಯಾಗಿ ಆಯೋಜಿಸಲು ವ್ಯಾಪಕ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಇಂತಹ ಮಹತ್ವದ ಯುವ ಉತ್ಸವದ ಅವಕಾಶ ಕರ್ನಾಟಕಕ್ಕೆ ದೊರೆತಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿರುವ ಯುವ ಜನೋತ್ಸವವನ್ನು ಯಶಸ್ವಿಗೊಳಿಸಲು ಸರ್ಕಾರ ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

- Advertisement -


ಕೇಂದ್ರ ಯುವಜನ ಮತ್ತು ಕ್ರೀಡೆ, ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಸಿಂಗ್ ಠಾಕೂರ್ ಮಾತನಾಡಿ, ರಾಜ್ಯದಲ್ಲಿ ಖೇಲೋ ಇಂಡಿಯಾ ಕ್ರೀಡಾ ಕೂಟವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಗಿದ್ದು, ಇದಕ್ಕಾಗಿ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಯುವ ಶಕ್ತಿಯ ಪ್ರತೀಕವಾದ ರಾಷ್ಟ್ರೀಯ ಯುವ ಜನೋತ್ಸವ ಕೂಡ ಯಶಸ್ವಿಯಾಗಲಿ. ಜನರ ಪಾಲ್ಗೊಳ್ಳುವಿಕೆಯ ಕ್ರಮಗಳಿಗೆ ಮೆಚ್ಚುಗೆ ಸೂಚಿಸಿದರು. ಉತ್ಸವದ ಲೋಗೋ ಮತ್ತು ಮ್ಯಾಸ್ಕಟ್ ವಿನ್ಯಾಸಕ್ಕಾಗಿ ಸ್ಪರ್ಧೆ ಆಯೋಜಿಸಿದ್ದು ಉತ್ತಮ ಬೆಳವಣಿಗೆ ಎಂದರು.
ಲೋಗೋ ಬಿಡುಗಡೆ ಬಳಿಕ ಅನುರಾಗ್ ಸಿಂಗ್ ಠಾಕೂರ್ ನೇತೃತ್ವದಲ್ಲಿ ಯುವ ಜನೋತ್ಸವ ಕುರಿತು ಪರಿಶೀಲನಾ ಸಮಿತಿ ಸಭೆ ನಡೆಸಲಾಯಿತು. ರಾಷ್ಟ್ರೀಯ ಯುವ ಜನೋತ್ಸವ ಯಶಸ್ವಿಗೊಳಿಸುವ ಬಗ್ಗೆ ಮಹತ್ವದ ಸಮಾಲೋಚನೆ ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆ, ಸಿದ್ದತೆ ಸೇರಿದಂತೆ ಒಟ್ಟಾರೆ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು. ದಲ್ಲದೆ ಯುವಜನ ಮೇಳದಲ್ಲಿ ಯುವ ಶಾಸಕರು, ಸಂಸದರು ಹಾಗೂ ಇತರ ಜನಪ್ರತಿನಿಧಿಗಳ ಗೋಷ್ಠಿಯನ್ನು ಆಯೋಜಿಸಲು ತೀರ್ಮಾನಿಸಲಾಯಿತು. ವಿವಿಧ ರಾಜ್ಯಗಳಿಂದ ಆಗಮಿಸುವ ಯುವಜನರಿಗೆ ರೈಲ್ವೆ ವಿಶೇಷ ಬೋಗಿ ಅಳವಡಿಸುವ ಕುರಿತು, ರೈಲ್ವೆ ಮಂಡಳಿಯು ಒಪ್ಪಿಗೆ ನೀಡಿತು.

ಜನವರಿ 12-16 ರವರೆಗೂ ಹುಬ್ಬಳ್ಳಿ ಧಾರವಾಡದಲ್ಲಿ ರಾಷ್ಟ್ರೀಯ ಯುವ ಜನೋತ್ಸವ ನಡೆಯಲಿದ್ದು, ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 12 ರಂದು ರಾಷ್ಟ್ರೀಯ ಯುವ ಜನೋತ್ಸವವನ್ನು ಉದ್ಘಾಟಿಸಲಿದ್ದಾರೆ.
ಲಾಂಛನ ಮತ್ತು ಮಾಸ್ಕಟ್ ರಚನೆಗಾಗಿ ದೇಶಾದ್ಯಂತ ಆಸಕ್ತ ಕ್ರಿಯಾಶೀಲ ಪ್ರತಿನಿಧಿಗಳು ಭಾಗವಹಿಸಿದ್ದರು.
ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ – ಭಾರತ ಸರ್ಕಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ – ಕರ್ನಾಟಕ ಸರ್ಕಾರ, ರಾಷ್ಟ್ರೀಯ ಸೇವಾ ಯೋಜನಾ ಕೋಶ – ಕರ್ನಾಟಕ ಸರ್ಕಾರ, ಹಾಗೂ ಎನ್. ವೈ. ಕೆ. ಎಸ್., ಕರ್ನಾಟಕ ಸಹಯೋಗದೊಂದಿಗೆ “ಲೋಗೋ, ಮಾಸ್ಕಾಟ್ ಮತ್ತು ಥೀಮ್ ರಚನಾ ಸ್ಪರ್ಧೆ”ಯನ್ನು ಆಹ್ವಾನಿಸಲಾಗಿತ್ತು.


ಈ ಸಂಬಂಧ 70 ಲೋಗೋ, 11 ಮ್ಯಾಸ್ಕಾಟ್ ಹಾಗೂ 9 ಥೀಮ್ ಗಳನ್ನು ಸ್ಪರ್ಧೆಯಲ್ಲಿ ಪ್ರಸ್ತುತಪಡಿಸಲಾಯಿತು.
ಒಡಿಶಾದ ಬನ್ಸಿಲಾಲ್ ಕೇತ್ಕಿ ರೂಪಿಸಿದ ಲೋಗೋವನ್ನು ಆಯ್ಕೆ ಮಾಡಲಾಗಿದ್ದು, ಅವರಿಗೆ 5೦ ಸಾವಿರ ರೂ. ಗಳ ಬಹುಮಾನ ದೊರೆಯಲಿದೆ.
ಅಂತೆಯೇ ಬೆಂಗಳೂರಿನ ಇನ್ಬಂ ಅವರು ರೂಪಿಸಿದ ಚಂಪಿ ಚಿಕ್ಕ ಮ್ಯಾಸ್ಕಟ್ ಆಯ್ಕೆಯಾಗಿದ್ದು, ಅವರಿಗೂ 5೦ ಸಾವಿರ ರೂ. ಗಳ ಬಹುಮಾನ ನೀಡಲಾಗುತ್ತಿದೆ.



Join Whatsapp