ಬೆಂಗಳೂರು: ನ್ಯಾಷನಲ್ ವಿಮೆನ್ಸ್ ಫ್ರಂಟ್ ಕರ್ನಾಟಕ ಇದರ ರಾಜ್ಯ ಸಮಿತಿ ಸಭೆಯು ರಾಜ್ಯಾಧ್ಯಕ್ಷೆ ಫರ್ಝಾನ ಮುಹಮ್ಮದ್ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಫರ್ಝಾನ ಮುಹಮ್ಮದ್ , ರಾಜ್ಯದಲ್ಲಿ ಮಹಿಳಾ ದೌರ್ಜನ್ಯವು ಎಗ್ಗಿಲ್ಲದೇ ಸಾಗುತ್ತಿದೆ. ಸರಕಾರವು ಮಹಿಳೆಯರಿಗಾಗಿ ಸರ್ಕಾರ ಯಾವುದೇ ಹೊಸ ಕಾನೂನನ್ನು ಜಾರಿಗೆ ತರಲು ತಯಾರಿಲ್ಲ. ಬದಲಾಗಿ ತಪ್ಪಿತಸ್ಥರ ರಕ್ಷಣೆಯಲ್ಲಿ ಮಗ್ನವಾಗಿದೆ ಎಂದು ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ರಾಜ್ಯ ಕಾರ್ಯದರ್ಶಿ ರಮ್ಲತ್ ವರದಿ ಮಂಡಿಸಿದರು. ಮುಂದಿನ ಕಾರ್ಯಯೋಜನೆಗಳ ಬಗ್ಗೆ ಚರ್ಚಿಸಿ ಮಹತ್ವದ ನಿರ್ಣಯ ಕೈಗೊಳ್ಳಲಾಯಿತು.
ಮುಸ್ಲಿಂ ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಮೇಲೆ ಕಣ್ಣಿಟ್ಟಿರುವ ಫ್ಯಾಶಿಸ್ಟ್ ಸರ್ಕಾರವು ಶಿರವಸ್ತ್ರಕ್ಕೆ ಅಡ್ಡಿಪಡಿಸಿದೆ. ಇದೀಗ ಮೈಸೂರಿನಲ್ಲಿ ಮುಸ್ಲಿಂ ಹೆಣ್ಣು ಮಕ್ಕಳು ಹೆಚ್ಚಾಗಿ ವ್ಯಾಸಂಗ ಮಾಡುತ್ತಿರುವ ಫಾರೂಖಿಯಾ ಶಾಲೆಯನ್ನು ಸ್ಥಳೀಯ ಅಧಿಕಾರಿಗಳ ಮೂಲಕ ಮುಚ್ಚಿಸಿರುವುದು ಮುಸ್ಲಿಂ ಹೆಣ್ಣುಮಕ್ಕಳ ವಿದ್ಯಾಭ್ಯಾಸವನ್ನು ಮೊಟಕುಗೊಳಿಸುವ ಷಡ್ಯಂತ್ರದ ಭಾಗವಾಗಿದೆ ಎಂದು ನ್ಯಾಷನಲ್ ವಿಮೆನ್ಸ್ ಫ್ರಂಟ್ ರಾಜ್ಯ ಸಮಿತಿಯು ಅಭಿಪ್ರಾಯ ಪಡುತ್ತದೆ. ಬಂದ್ ಮಾಡಿರುವ ಫಾರೂಖಿಯಾ ಶಾಲೆಯನ್ನು ಕೂಡಲೇ ತೆರೆದು ವಿದ್ಯಾರ್ಥಿನಿಯರಿಗೆ ವ್ಯಾಸಂಗ ಮಾಡಲು ಅನುವು ಮಾಡಿ ಕೊಡಬೇಕಾಗಿ ಸಮಿತಿ ಆಗ್ರಹಿಸಿದೆ.
ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಾರ್ವಜನಿಕರ ಜೀವನ ಅಸ್ತವ್ಯಸ್ತವಾಗಿದ್ದು, ಸಾಕಷ್ಟು ಹಾನಿ, ನಷ್ಟ ಸಂಭವಿಸಿದೆ. ಗುಡ್ಡೆ ಕುಸಿತ, ಚರಂಡಿಯಲ್ಲಿ ಹೆಚ್ಚುತ್ತಿರುವ ನೀರಿನ ರಭಸ ಮತ್ತು ಮುಳುಗಡೆಯಿಂದಾಗಿ ಮಕ್ಕಳು ಮತ್ತು ಮಹಿಳೆಯರು ಭಯ ಭೀತಿಯಿಂದ ದಿನ ಕಳೆಯುವಂತಾಗಿದೆ. ಈ ಸಂದರ್ಭದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿರುವ ಜಿಲ್ಲಾಡಳಿತವು ಶಾಲಾ ಮಕ್ಕಳಿಗೆ ರಜೆ ಘೋಷಣೆ ಮಾಡಿ ಹಾಯಾಗಿದೆ. ಮಳೆಯಿಂದ ಸಂಭವಿಸಿರುವ ಎಲ್ಲಾ ಅನಾಹುತಗಳಿಗೆ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದ ಪೂರ್ವ ತಯಾರಿ ಇಲ್ಲದಿರುವುದು ಮತ್ತು ನಿರ್ಲಕ್ಷ್ಯ ಧೋರಣೆ ಮೂಲ ಕಾರಣವಾಗಿರುತ್ತದೆ. ಆದ್ದರಿಂದ ಪ್ರಕೃತಿ ವಿಕೋಪದ ಎಲ್ಲಾ ನಷ್ಟಗಳನ್ನು ಸರ್ಕಾರವೇ ಭರಿಸಬೇಕು ಮತ್ತು ಸಂತ್ರಸ್ತರಿಗೆ ಗರಿಷ್ಠ ಮೊತ್ತದ ನಷ್ಟ ಪರಿಹಾರವನ್ನು ಘೋಷಿಸಬೇಕು ಮತ್ತು ಮಳೆ ಇನ್ನೂ ಮುಂದುವರಿದು ಪ್ರವಾಹದ ಸಾಧ್ಯತೆ ಇರುವ ಪ್ರದೇಶಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನ್ಯಾಷನಲ್ ವಿಮೆನ್ಸ್ ಫ್ರಂಟ್ ರಾಜ್ಯ ಸಮಿತಿ ಆಗ್ರಹಿಸಿದೆ ಎಂದು ಪ್ರಕಟಣೆ ತಿಳಿಸಿದೆ.