ಸೆ. 17 ರಂದು “ರಾಷ್ಟ್ರೀಯ ನಿರುದ್ಯೋಗ ದಿನ” ಆಚರಣೆ- ರಕ್ಷಾ ರಾಮಯ್ಯ

Prasthutha|

ಬೆಂಗಳೂರು; ದೇಶದಲ್ಲಿ ದಿನದಿಂದ ದಿನಕ್ಕೆ ನಿರುದ್ಯೋಗ ಸಮಸ್ಯೆ ಬಿಗಡಾಯಿಸುತ್ತಿದ್ದು, ತಕ್ಷಣ ಉದ್ಯೋಗ ಒದಗಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಲು ಸೆಪ್ಟೆಂಬರ್ 17 ರಂದು “ರಾಷ್ಟ್ರೀಯ ನಿರುದ್ಯೋಗ ದಿನ” ಆಚರಿಸಲಾಗುವುದು ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಹೇಳಿದ್ದಾರೆ.


ಬೆಲೆ ಏರಿಕೆ ವಿರೋಧಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಎತ್ತಿನ ಗಾಡಿ ಚಲೋ ಪ್ರತಿಭಟನೆಯಲ್ಲಿ ಪಾಲ್ಗೊಂಡ ಅವರು, ಸುದ್ದಿಗಾರರ ಜತೆ ಮಾತನಾಡಿ, ದೇಶದಲ್ಲಿ ನಿರುದ್ಯೋಗ ಸಮಸ್ಯೆ ಗಂಭೀರವಾಗಿದ್ದು, ನಿರುದ್ಯೋಗಿಗಳ ಸಂಖ್ಯೆ ಹಿಂದೆಂದೂ ಇಲ್ಲದಷ್ಟು ಹೆಚ್ಚಾಗಿದೆ. ಯುವ ಜನರ ಆಕ್ರೋಶವನ್ನು ಪ್ರಧಾನಿ ತನಕ ಮುಟ್ಟಿಸಲು ಅಂದು ವ್ಯಾಪಕ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.

- Advertisement -


ಯುವ ಸಮೂಹ, ಯುವ ಕಾರ್ಯಕರ್ತರು ಅಂದು ತಮ್ಮ ಟ್ವಿಟ್ಟರ್ ಹಾಗೂ ಇತರೆ ಸಾಮಾಜಿಕ ಜಾಲತಾಣದ ಖಾತೆಗಳ ಮೂಲಕ ಉದ್ಯೋಗ ನೀಡುವಂತೆ ಪ್ರಧಾನಿ ಮೋದಿ ಅವರನ್ನು ಒತ್ತಾಯಿಸಬೇಕೆಂದು ಮನವಿ ಮಾಡಿದರು. ನಿರುದ್ಯೋಗದ ಜತೆ ಬೆಲೆ ಏರಿಕೆಯಿಂದ ಜನ ನರಳುತ್ತಿದ್ದಾರೆ. ಜನ ಸಾಮಾನ್ಯರು ಯಾವತ್ತೂ ಈ ಪರಿ ಸಂಕಟ ಎದುರಿಸಿರಲಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತೆರಿಗೆ ಹಾಕಿ ಅದರ ಆದಾಯದಿಂದ ಸರ್ಕಾರವನ್ನು ನಡೆಸುವ ಸ್ಥಿತಿಗೆ ದೇಶವನ್ನು ಬಿಜೆಪಿ ನಾಯಕರು ತಂದಿಟ್ಟಿದ್ದಾರೆ. ದರ ಹೆಚ್ಚಳದಿಂದ ಎಲ್ಲಾ ವರ್ಗದ ಜನರ ಖರ್ಚು ವೆಚ್ಚ ಹೆಚ್ಚಾಗಿದೆ. ಜತೆಗೆ ನಿರುದ್ಯೋಗ ಪ್ರಮಾಣ ಏರಿಕೆಯಾಗುತ್ತಿದೆ. ರಾಜ್ಯದಲ್ಲಿ ಒಂದೂವರೆ ವರ್ಷದಿಂದ 40 ಲಕ್ಷಕ್ಕೂ ಹೆಚ್ಚು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಕೆಲವರಿಗೆ ಈಗಲೂ ಅರ್ದ ವೇತನ ದೊರೆಯುತ್ತಿದೆ. ಗಾರ್ಮೇಂಟ್ಸ್ ನೌಕರರು, ಚಾಲಕರು, ಅಸಂಘಟಿತ ಕಾರ್ಮಿಕರು ಹೀಗೆ ಲೆಕ್ಕವಿಲ್ಲದಷ್ಟು ಜನ ಉದ್ಯೋಗ ಕಳೆದುಕೊಂಡು ಕಣ್ಣೀರಿನಲ್ಲಿ ಮುಳುಗಿದ್ದಾರೆ. ಜನರ ಆಕ್ರೋಶವನ್ನು ದಿಲ್ಲಿಯ ತನಕ ಮುಟ್ಟಿಸುತ್ತೇವೆ ಎಂದರು.


ಬೆಲೆ ಏರಿಕೆ ವಿರುದ್ಧ ಕೇವಲ ಸಾಮಾಜಿಕ ಜಾಲತಾಣವಷ್ಟೇ ಅಲ್ಲದೇ ಕೇಂದ್ರದ ಇತರೆ ಜನ ವಿರೋಧಿ ನೀತಿಗಳ ವಿರುದ್ಧ ದೊಡ್ಡಮಟ್ಟದಲ್ಲಿ ಧ್ವನಿ ಎತ್ತಬೇಕು. ಜನರಿಗೆ ಸರ್ಕಾರದ ವೈಫಲ್ಯಗಳ ಬಗ್ಗೆ ಮನವರಿಕೆ ಮಾಡಿಕೊಡುವಂತೆ ಯುವ ಕಾರ್ಯಕರ್ತರಿಗೆ ಸೂಚಿಸಲಾಗಿದೆ ಎಂದು ರಕ್ಷಾ ರಾಮಯ್ಯ ಹೇಳಿದರು.

- Advertisement -