ಎನ್.ಆರ್.ಪುರ: ಸರ್ಕಾರದಲ್ಲಿ ಹಲವಾರು ಯೋಜನೆಗಳಿದ್ದರೂ ಯಾವ ಯೋಜನೆಯೂ ಗ್ರಾಮೀಣ ಜನರಿಗೆ ತಲುಪುತ್ತಿಲ್ಲ. ಎಲ್ಲವೂ ನಗರದ ಜನರು ಹಾಗೂ ಉಳ್ಳವರ ಪಾಲಾಗುತ್ತಿವೆ ಎಂದು ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ ಆರೋಪಿಸಿದರು.
ಜೆಡಿಎಸ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷಗಳು ಅಭಿವೃದ್ಧಿ ವಿಚಾರದ ಬದಲು ಹಿಜಾಬ್, ಹಿಂದುತ್ವವೆಂಬ ಧರ್ಮ ಸಂಘರ್ಷದಲ್ಲಿ ದಾರಿತಪ್ಪಿಸುತ್ತಿವೆ. ಬಡವರ ಮೂಲ ಸಮಸ್ಯೆಗಳ ಬಗ್ಗೆ ಕೇಳುವವರಿಲ್ಲವಾಗಿದೆ. ಧಾರ್ಮಿಕ ಭಾವನೆಗಳನ್ನು ಕೆದಕುವ ಮೂಲಕ ಸರ್ಕಾರದ ಲೋಪವನ್ನು ಮರೆಮಾಚುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಶೃಂಗೇರಿ ಕ್ಷೇತ್ರದಲ್ಲಿ ಹಾಲಿ, ಮಾಜಿ ಶಾಸಕರ ಕಚ್ಚಾಟದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಆರೋಪ, ಪ್ರತ್ಯಾಪರೋಪಗಳಲ್ಲಿ ಇಬ್ಬರೂ ಕಾಲಹರಣ ಮಾಡುತ್ತಿದ್ದಾರೆ. ಪ್ರಾದೇಶಿಕ ಸಮಸ್ಯೆಗಳ ನಿವಾರಣೆ ಜೆಡಿಎಸ್ನಂತಹ ಪ್ರಾದೇಶಿಕ ಪಕ್ಷದಿಂದ ಮಾತ್ರ ಸಾಧ್ಯ. ಮುಂಬರುವ ಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳನ್ನು ಹೊರಗಿಟ್ಟು ಜೆಡಿಎಸ್ ಬೆಂಬಲಿಸಬೇಕು ಎಂದರು.