10ರಂದು ರಾಷ್ಟ್ರೀಯ ಜಂತುಹುಳ ನಿವಾರಣಾ ದಿನ: ಮಾತ್ರೆ ಸೇವನೆಯಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿ: ಡಾ. ಕಿಶೋರ್ ಕುಮಾರ್

Prasthutha|

ಮಂಗಳೂರು: ಭವಿಷ್ಯದಲ್ಲಿ ಮಕ್ಕಳು ರೋಗಗಳಿಂದ ಮುಕ್ತರಾಗಿ ಆರೋಗ್ಯ ಪೂರ್ಣ ಜೀವನ ನಡೆಸಲು ಸಹಕಾರಿಯಾಗಲು ಇದೇ ಆ.10 ರಂದು ರಾಷ್ಟ್ರೀಯ ಜಂತುಹುಳ ನಿವಾರಣಾ ದಿನವನ್ನು ಆಚರಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್ ತಿಳಿಸಿದರು.

- Advertisement -


ಅವರು ಆ.8ರ ಸೋಮವಾರ ಡಿಎಚ್ ಒ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮಕ್ಕಳು ಸೇರಿದಂತೆ ಎಲ್ಲರಲ್ಲೂ ಜಂತು ಹುಳುವಿನ ಸಮಸ್ಯೆ ಸಾಮಾನ್ಯವಾಗಿರುತ್ತದೆ. ಜಂತುಹುಳುಗಳು ಮನುಷ್ಯನ ಕರುಳಿನಿಂದ ಆಹಾರ ಪಡೆದು ಜೀವಿಸುವ ಉಪಜೀವಿಗಳು. ಬರಿಗಾಲಿನಲ್ಲಿ ಬಯಲಿನಲ್ಲಿ ತಿರುಗಾಡುವುದು, ಕೈ ತೊಳೆಯದೆ ಆಹಾರ ಸೇವಿಸುವುದು, ಬಯಲು ಮಲ ವಿಸರ್ಜನೆ, ಶೌಚದ ನಂತರ ಕೈ ತೊಳೆಯದಿರುವುದು, ತೊಳೆಯದ ಹಣ್ಣು, ಹಂಪಲು ಸೇವನೆ ಸೇರಿದಂತೆ ಇನ್ನಿತರ ಕಾರಣಗಳಿಂದ ಕ್ರಿಮಿಗಳು ಹೊಟ್ಟೆ ಸೇರಿ ಕರುಳಿನಲ್ಲಿ ಸಂತಾನೋತ್ಪತ್ತಿ ಮಾಡಿ ಜಂತುಹುಳುವಿನ ಸಮಸ್ಯೆ ಎದುರಾಗುತ್ತದೆ, ಇದರಿಂದಾಗಿ ಹೊಟ್ಟೆ ನೋವು, ಭೇದಿ, ಹಸಿವಿಲ್ಲದಿರುವುದು, ಸುಸ್ತಾಗುವಂತಹ ಲಕ್ಷಣಗಳ ಜೊತೆಗೆ ಆಹಾರದ ಪೌಷ್ಟಿಕತೆ ದೇಹವನ್ನು ಸೇರದೆ ರಕ್ತ ಹೀನತೆಯುಂಟಾಗುತ್ತದೆ, ಇದರಿಂದ ಮಕ್ಕಳು ಶಾಲೆಗೆ ಸರಿಯಾಗಿ ಹೋಗಲಾಗದೆ ಶಿಕ್ಷಣ ಕುಂಠಿತವಾಗುವ ಸಂಭವವು ಇರುತ್ತದೆ ಎಂಬ ಮಾಹಿತಿ ನೀಡಿದರು.


ಆದ ಕಾರಣ ಜಂತುಹುಳ ಬಾಧೆಯಿಂದ ಮಕ್ಕಳನ್ನು ರಕ್ಷಿಸಲು ಆಗಸ್ಟ್ 10ರ ಬುಧವಾರ ನಗರದ ಮಣ್ಣಗುಡ್ಡೆಯ ಸರ್ಕಾರಿ ಶಾಲೆಯಲ್ಲಿ ರಾಷ್ಟ್ರೀಯ ಜಂತುಹುಳ ನಿವಾರಣಾ ದಿನ ಆಚರಿಸಲಾಗುತ್ತಿದೆ. ಆ ಮೂಲಕ ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲಾ ಕಾಲೇಜುಗಳ 1 ರಿಂದ 19 ವರ್ಷದ ಸುಮಾರು ಐದು ಲಕ್ಷಕ್ಕಿಂತಲೂ ಹೆಚ್ಚು ಮಕ್ಕಳಿಗೆ 2022-23ನೇ ಸಾಲಿನ ಪ್ರಥಮ ಸುತ್ತಿನಲ್ಲಿ ಜಂತುಹುಳ ನಿವಾರಣಾ ಔಷಧಿಯಾದ ವಿಶ್ವ ಸಂಸ್ಥೆ ಪ್ರಮಾಣೀಕರಿಸಿದ ಅಲ್ಬೆಂಡಝೋಲ್ 400 ಮಿ.ಗ್ರಾಂ. ಮಾತ್ರೆ ಉಚಿತವಾಗಿ ವಿತರಿಸಲಾಗುತ್ತಿದೆ, ಅಂದು ಮಾತ್ರೆ ಪಡೆಯಲಾಗದ ಮಕ್ಕಳಿಗೆ ಆಗಸ್ಟ್ 17ರಂದು ವಿತರಿಸಲಾಗುವುದು. ಜೊತೆಗೆ ಶಾಲೆ ಅಥವಾ ಅಂಗನವಾಡಿಗಳಿಂದ ಹೊರಗುಳಿದ ಮಕ್ಕಳಿಗೆ ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆ ಮತ್ತು ಕಿರಿಯ ಆರೋಗ್ಯ ಸಹಾಯಕಿಯರು ಮನೆಗಳಿಗೆ ಭೇಟಿ ನೀಡಿ ವಿತರಿಸಲಿದ್ದಾರೆ ಎಂದವರು ಹೇಳಿದರು.
ಜಂತುಹುಳ ಮಾತ್ರೆಯು ಚೀಪುವ ಮಾತ್ರೆಯಾಗಿದ್ದು, 1 ರಿಂದ 2 ವರ್ಷದ ಮಕ್ಕಳಿಗೆ ಅರ್ಧ ಮಾತ್ರೆಯನ್ನು ಎದೆಹಾಲಿನಲ್ಲಿ ಬೆರೆಸಿ ನೀಡಬೇಕು. 2 ರಿಂದ 19 ವರ್ಷದೊಳಗಿನ ಮಕ್ಕಳಿಗೆ 1 ಮಾತ್ರೆ ನೀಡಲಾಗುತ್ತದೆ ಹಾಗೂ ಪ್ರತೀ ಆರು ತಿಂಗಳಿಗೊಮ್ಮೆ ಈ ಮಾತ್ರೆಗಳನ್ನು ಸೇವಿಸಬಹುದಾಗಿದೆ ಎಂದರು.

- Advertisement -

ಜಂತುಹುಳ ಮಾತ್ರೆ ಸೇವನೆಯಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ಪೌಷ್ಟಿಕತೆ ಸುಧಾರಿಸುತ್ತದೆ, ಏಕಾಗ್ರತೆ ಮತ್ತು ಕಲಿಕಾ ಸಾಮಥ್ರ್ಯ ಹೆಚ್ಚುತ್ತದೆ ಮತ್ತು ಬಹುಮುಖ್ಯವಾಗಿ ಜಂತುಹುಳ ಬಾಧೆ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದನ್ನು ತಪ್ಪಿಸಬಹುದು ಎಂದು ತಿಳಿಸಿದರು.
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಬದ್ರುದ್ದೀನ್, ಡಾ. ರಾಜೇಶ್, ಡಾ. ಸುದರ್ಶನ್, ಡಾ. ಸುಜಯ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ., ಜಿಲ್ಲಾ ಶುಶ್ರೂಣಾಧಿಕಾರಿ ಲಿಸ್ಸಿ ಗೋಷ್ಠಿಯಲ್ಲಿದ್ದರು.

Join Whatsapp