ನರಗುಂದ: ಬೈಕ್ ಅಡ್ಡಗಟ್ಟಿ ಮುಸ್ಲಿಮ್ ಯುವಕನನ್ನು ಹತ್ಯೆ ಮಾಡಿ, ಮತ್ತೋರ್ವನನ್ನು ಮಾರಕಾಯುಧಗಳಿಂದ ಕಡಿದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ನರಗುಂದ ಪೊಲೀಸರು ಬಜರಂಗದಳದ ನಾಲ್ವರು ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ನರಗುಂದ ಸಿದ್ದನಬಾವಿ ನಿವಾಸಿ ಮಲ್ಲಿಕಾರ್ಜುನ ಹಿರೇಮಠ ಅಲಿಯಾಸ್ ಗುಂಡ್ಯಾ (20), ಸಿದ್ದನಬಾವಿ ಓಣಿಯ ನಿವಾಸಿ ಚನ್ನಬಸಪ್ಪ ಅಕ್ಕಿ ಅಲಿಯಾಸ್ ಚನ್ನಪ್ಪ (19), ನರಗುಂದ ವಾಸವಿ ಕಲ್ಯಾಣ ಮಂಟಪ ಹತ್ತಿರದ ನಿವಾಸಿ ಸಕ್ರಪ್ಪ ಕಾಕನೂರ (19) ಹಾಗೂ ಸುಬೇದಾರ್ ಓಣಿಯ ನಿವಾಸಿ ಸಂಜು ನಲವಡಿ (35) ಬಂಧಿತ ಆರೋಪಿಗಳು. ಇವರೆಲ್ಲರೂ ಬಜರಂಗದಳದಲ್ಲಿ ಗುರುತಿಸಿಕೊಂಡಿದ್ದು, ಮಲ್ಲಿಕಾರ್ಜುನ ಮತ್ತು ಚನ್ನಬಸಪ್ಪ ವಿದ್ಯಾರ್ಥಿಗಳಾಗಿದ್ದರೆ, ಸಕ್ರಪ್ಪ ಕೂಲಿ ಕೆಲಸ ಹಾಗೂ ಸಂಜು ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಇನ್ನೂ 7-8 ಮಂದಿ ನಾಪತ್ತೆಯಾಗಿದ್ದು, ಅವರ ಪತ್ತೆಗೆ ಬಲೆ ಬೀಸಲಾಗಿದೆ ಎಂದು ನರಗುಂದ ಪೊಲೀಸರು ಮಾಹಿತಿ ನೀಡಿದ್ದಾರೆ.
ಸೋಮವಾರ ರಾತ್ರಿ ನರಗುಂದಲ್ಲಿರುವ ತನ್ನ ಹೋಟೆಲ್ ಬಂದ್ ಮಾಡಿ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದ ನರಗುಂದ ನಿವಾಸಿ ಸಮೀರ್ ಶಹಾಪುರ (19) ಹಾಗೂ ಆತನ ಸ್ನೇಹಿತ ಸಂಶೀರ್ ಅವರ ಮೇಲೆ ಬಜರಂಗದಳದ ಕಾರ್ಯಕರ್ತರು ಮಾರಕಾಯುಧಗಳಿಂದ ದಾಳಿ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಮೀರ್ ಶಹಾಪುರ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದರು. ಸಂಶೀರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿಗಳು ಮುಸ್ಲಿಮ್ ದ್ವೇಷದ ಹಿನ್ನೆಲೆಯಲ್ಲಿ ಸಂಚು ರೂಪಿಸಿ ಹತ್ಯೆ ಮಾಡಿರುವುದು ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ.