ನರೇಂದ್ರ ದಾಭೋಲ್ಕರ್ ಹತ್ಯೆಯ ಪ್ರಮುಖ ವ್ಯಕ್ತಿಗಳನ್ನು ಇನ್ನೂ ಬಂಧಿಸಿಲ್ಲ: ಕುಟುಂಬದ ಆರೋಪ

Prasthutha|

ನವದೆಹಲಿ: ಖ್ಯಾತ ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರನ್ನು ಗುಂಡಿಟ್ಟು ಹತ್ಯೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಇದುವರೆಗೂ ಬಂಧಿಸಿಲ್ಲ ಎಂದು ಅವರ ಕುಟುಂಬ ಆರೋಪಿಸಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕುಟುಂಬದ ಸದಸ್ಯರು, ಸಿಬಿಐ ಆರೋಪಿಗಳನ್ನು ಬಂಧಿಸಿ ತನಿಖೆಯನ್ನು ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

- Advertisement -

ಈ ಮಧ್ಯೆ ಪ್ರಕರಣದ ಕುರಿತು ವಾದ ಪ್ರತಿವಾದ ಶುಕ್ರವಾರದಿಂದ ಪುಣೆ ನ್ಯಾಯಾಲಯದಲ್ಲಿ ನಡೆಯಲಿದೆಯೆಂದು ಹೇಳಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆಯನ್ನು ಮುಂದೂಡಲಾಗಿತ್ತೆಂದು ಸಿಬಿಐ ಪರ ವಕೀಲರಾದ ಪ್ರಕಾಶ್ ಸೂರ್ಯವಂಶಿ ತಿಳಿಸಿದ್ದಾರೆ.

ಎಂಟು ವರ್ಷಗಳ ಹಿಂದೆ ನಡೆದ ಈ ಹತ್ಯೆ ಪ್ರಕರಣದಲ್ಲಿ ಸಿಬಿಐ ಎಂಟು ಮಂದಿ ಆರೋಪಿಗಳನ್ನು ಬಂಧಿಸಿದೆ. ಅದರಲ್ಲಿ ಆರೋಪಿಗಳಾದ ವೀರೇಂದ್ರ ಸಿಂಹ ತಾವ್ಡೆ, ಶರದ್ ಕಲಾಸ್ಕರ್, ಸಚಿನ್ ಅಂಡುರೆ, ವಿಕ್ರಮ್ ಭಾವೆ ಮತ್ತು ಸಂಜೀವ್ ಪುನಲೇಕರ್ ವಿರುದ್ಧ ಈಗಾಗಲೇ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ ಎಂದು ದಾಭೋಲ್ಕರ್ ಕುಟುಂಬ ಪರ ವಕೀಲರು ತಿಳಿಸಿದ್ದಾರೆ.

- Advertisement -

ಕಲಾಸ್ಕರ್ ಮತ್ತು ಸಚಿನ್ ಅಂಡುರೆ ಎಂಬವರು 67 ವರ್ಷದ ಮೌಢ್ಯ ವಿರೋಧಿ ಕಾರ್ಯಕರ್ತರಾದ ದಾಭೋಲ್ಕರ್ ಅವರನ್ನು ಆಗಸ್ಟ್ 20, 2013 ರಂದು ಬೆಳಗ್ಗಿನ ವಾಕಿಂಗ್ ವೇಳೆ ಗುಂಡಿಕ್ಕಿ ಹತ್ಯೆ ನಡೆಸಿದ್ದರು. ವಕೀಲರಾದ ಪುನಲೇಕರ್ ಅವರ ಸಲಹೆ ಮೇರೆಗೆ ಕಲಾಸ್ಕರ್ ಅವರು ಈ ಅಪರಾಧ ಕೃತ್ಯಕ್ಕೆ ಬಳಸಲಾದ ಬಂದೂಕನ್ನು ನಾಶಪಡಿಸಿದ್ದ. ಪ್ರಸಕ್ತ ಭಾವೆ ಮತ್ತು ಪುನಲೇಕರ್ ಸೇರಿದಂತೆ ಐವರು ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ದಾಭೋಲ್ಕರ್ ಅವರ ಮಗನಾದ ಡಾ. ಹಮೀದ್ ದಾಭೋಲ್ಕರ್ ಅವರು ತಂದೆಯ ಹತ್ಯೆಯಲ್ಲಿ ಭಾಗಿಯಾದ ನೈಜ್ಯ ಅಪರಾಧಿಗಳನ್ನು ಸಿಬಿಐ ಪತ್ತೆಹಚ್ಚಬೇಕು. ನೈಜ್ಯ ಅಪರಾಧಿಗಳ ಬಂಧನವಾಗುವವರೆಗೆ ವಿಚಾರವಾದಿ, ಲೇಖಕರು, ಸಾಮಾಜಿಕ ಕಾರ್ಯಕರ್ತರು ಮತ್ತು ಪತ್ರಕರ್ತರ ಮೇಲಿನ ಅಪಾಯ ಮುಂದುವರಿಯಲಿದೆಯೆಂದು ತಿಳಿಸಿದರು.



Join Whatsapp