ಮಂಗಳೂರು: ಕೇಂದ್ರ ಸರ್ಕಾರದಿಂದ ಗಣರಾಜ್ಯೋತ್ಸವಕ್ಕೆ ನಾರಾಯಣ ಗುರು ಟ್ಯಾಬ್ಲೋ ತಿರಸ್ಕಾರ ವಿಚಾರಕ್ಕೆ ಸಂಬಂಧಿಸಿ ಗಣರಾಜ್ಯೋತ್ಸವ ದಿನದಂದೇ ಮಂಗಳೂರಿನಲ್ಲಿ ಪ್ರತಿಭಟಿಸಲು ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಕರೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು ನಾರಾಯಣ ಗುರುಗಳ ಸ್ತಬ್ಧಚಿತ್ರ ನಿರಾಕರಣೆ ನನಗೆ ನೋವು ಕೊಟ್ಟಿದೆ. ಆ ದಿನ ನನಗೆ ನಿದ್ದೆಯೂ ಬಂದಿಲ್ಲ. ಇಡೀ ರಾತ್ರಿ ಕಣ್ಣೀರು ಹಾಕಿದ್ದೇನೆ. ನಾರಾಯಣ ಗುರುಗಳು ಯಾವ ಜಾತಿ, ಸಮುದಾಯ, ಧರ್ಮಕ್ಕೆ ಸೇರಿದವರಲ್ಲ. ಅವರು ಎಲ್ಲರಿಗೂ ಸೇರಿದ ಒಬ್ಬ ಮಹಾನ್ ವ್ಯಕ್ತಿ. ಈ ದುಷ್ಕೃತ್ಯ ಖಂಡನೆ ಮಾಡಿ ಜನವರಿ 26 ರಂದು ಗುರುಗಳ ಭಾವಚಿತ್ರ ಮೆರವಣಿಗೆ ನಡೆಸುತ್ತೇವೆ. ಮಂಗಳೂರಿನ ಕಂಕನಾಡಿ ಗರೋಡಿಯಿಂದ ಕುದ್ರೋಳಿ ದೇವಸ್ಥಾನದವರೆಗೆ ಮೆರವಣಿಗೆ ಮಾಡುತ್ತೇವೆ ಎಂದು ಹೇಳಿದ್ದಾರೆ.