ಸೆ.10 ರಂದು ನಾರಾಯಣ ಗುರುಗಳ ಜಯಂತಿ: ಮಂಗಳೂರಿನಲ್ಲಿ ರಾಜ್ಯಮಟ್ಟದ ಸಮಾರಂಭ

Prasthutha|

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ ರಾಜ್ಯ ಮಟ್ಟದ ಜಯಂತಿಯನ್ನು ಇದೇ ಸೆ.10ರ ಶನಿವಾರ ಮಂಗಳೂರು ನಗರದಲ್ಲಿ ಅರ್ಥಪೂರ್ಣವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಪ್ರಕಟಿಸಿದರು.

- Advertisement -

ಅವರು ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಸೋಮವಾರ ಈ ಕುರಿತು ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರತಿ ವರ್ಷವೂ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಜಯಂತಿಯನ್ನು ಆಚರಿಸಲಾಗುತ್ತಿತ್ತು, ಆದರೆ ಈ ಬಾರಿ ಮಂಗಳೂರು ನಗರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಸೆ.10ರಂದು ಅರ್ಥಪೂರ್ಣವಾಗಿ ಆಚರಿಸಲಾಗುವುದು, ಇದು ಒಂದು ಸಮುದಾಯಕ್ಕೆ ಸೀಮಿತವಾದ ಆಚರಣೆಯಲ್ಲ, ಎಲ್ಲಾ ಸಮುದಾಯಗಳೂ ಒಟ್ಟಾಗಿ ಸೇರಿ ಆಚರಿಸಬೇಕು, ಆ ದಿಸೆಯಲ್ಲಿ ಜಿಲ್ಲೆಯ ಜನತೆಯ ಸಹಭಾಗಿತ್ವ ಅಗತ್ಯ, ಎಲ್ಲರೂ ಸಹಕರಿಸುವಂತೆ ಅವರು ಕೋರಿದರು.

- Advertisement -

ಜಯಂತಿ ಪ್ರಯುಕ್ತ ಸೆ.10ರ ಸಂಜೆ 4 ಗಂಟೆಗೆ ರಾಜ್ಯ ಮಟ್ಟದ ಹಾಗೂ ಜಿಲ್ಲೆಯ ವೈವಿಧ್ಯಮಯ ಕಲಾತಂಡಗಳಿಂದ ಮೆರವಣಿಗೆ ಆಯೋಜಿಸಲಾಗುವುದು, ನಾರಾಯಣ ಗುರುಗಳ ಚರಿತ್ರೆ ಬಿಂಬಿಸಯವ ಚಿತ್ರಪ್ರದರ್ಶನವನ್ನು ಸಹ ಏರ್ಪಡಿಸಲಾಗುವುದು, ಸಂಜೆ 6ಗಂಟೆಗೆ ಸಭಾ ಕಾರ್ಯಕ್ರಮವನ್ನು ಟಿ.ಎಂ.ಎ.ಪೈ ಭವನದಲ್ಲಿ ಆಯೋಜಿಸಲಾಗುವುದು, ನುರಿತ ಉಪನ್ಯಾಸಕಾರರಿಂದ ಉಪನ್ಯಾಸವನ್ನು ಏರ್ಪಡಿಸಲಾಗುವುದು, ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗುವುದು ಎಂದರು.

ಈ ಜಯಂತಿಯನ್ನು ಯಶಸ್ವಿಗೊಳಿಸಲು ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮಗಳನ್ನು  ಕೈಗೊಳ್ಳಬೇಕು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಿಗೂ ಈ ಬಗ್ಗೆ ಸೂಚಿಸಲಾಗುವುದು, ಆಮಂತ್ರಣ ಪತ್ರಿಕೆಯ ಮುದ್ರಣ, ಹಂಚುವಿಕೆ, ವೇದಿಕೆ ಸಜ್ಜುಗೊಳಿಸುವುದು ಸೇರಿದಂತೆ ವಿವಿಧ ಕಾರ್ಯಗಳನ್ನು ಮುತುವರ್ಜಿಯಿಂದ ನಿರ್ವಹಿಸಲು ಅವರು ತಿಳಿಸಿದರು.

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ. ಅವರು ಮಾತನಾಡಿ, ರಾಜ್ಯಮಟ್ಟದ ಜಯಂತಿ ಆದ ಕಾರಣ ವಿವಿಧ ಉಪ ಸಮಿತಿಗಳನ್ನು ರಚಿಸಲಾಗುವುದು, ಶಿಷ್ಟಾಚಾರದಂತೆ ಆಚರಿಸಲಾಗುವುದು ಎಂದರು.

ಶಾಸಕರಾದ ವೇದವ್ಯಾಸ ಕಾಮತ್, ಡಾ. ವೈ ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕುಮಾರ್, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಸಹಾಯಕ ಆಯುಕ್ತ ಮದನ್ ಮೋಹನ್ ವೇದಿಕೆಯಲ್ಲಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಸ್ವಾಗತಿಸಿದರು.

ವಿವಿಧ ಸಂಘಟನೆಗಳ ಅಧ್ಯಕ್ಷರು, ಸದಸ್ಯರು, ಬಿಲ್ಲವ ಸಂಘಟನೆಗಳ ಮುಖ್ಯಸ್ಥರು, ಮಹಾನಗರ ಪಾಲಿಕೆ ಸದಸ್ಯರು ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಯಾಯಿಗಳು, ಅಭಿಮಾನಿಗಳು ಉಪಸ್ಥಿತರಿದ್ದರು.



Join Whatsapp