ನಾರಾಯಣ ಗುರು ಪಠ್ಯ ಕೈಬಿಟ್ಟ ಕ್ರಮ ವಿರೋಧಿಸಿ ಉಗ್ರ ಹೋರಾಟ; ನಾರಾಯಣ ಗುರು ವಿಚಾರ ವೇದಿಕೆಯಿಂದ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ

Prasthutha|

ಬೆಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಚರಿತ್ರೆಯನ್ನು ಸಮಾಜ ವಿಜ್ಞಾನದಿಂದ ಕೈಬಿಟ್ಟಿರುವ ಕ್ರಮ ಹಾಗೂ ಈಡಿಗ ಸಮಾಜಕ್ಕೆ ಪ್ರತ್ಯೇಕವಾಗಿ ಬ್ರಹ್ಮ ಶ್ರೀ ನಾರಾಯಣ ಗುರು ಹೆಸರಿನಲ್ಲಿ ನಿಗಮ ರಚಿಸಬೇಕೆಂದು ಈಡಿಗ, ಬಿಲ್ಲವ, ನಾಮಧಾರಿ ಮುಂತಾದ ಒಟ್ಟು 26 ಪಂಗಡಗಳನ್ನು ಒಳಗೊಂಡು ಬೃಹತ್ ಹೋರಾಟ ನಡೆಸಲಾಗುವುದು ಎಂದು ಶ್ರಿ ನಾರಾಯಣ ಗುರು ವಿಚಾರ ವೇದಿಕೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

- Advertisement -

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ್, ಉಪಾಧ್ಯಕ್ಷ ದತ್ತಾತ್ರೇಯ, ಮಾತನಾಡಿ, ಬ್ರಹ್ಮ ಶ್ರೀ ನಾರಾಯಣ ಗುರುಗಳ ಪಠ್ಯವನ್ನು ಕೈ ಬಿಟ್ಟಿರುವುದು ಅತ್ಯಂತ ಹಿಂದುಳಿದ ವರ್ಗಗಳ ವಿರೋಧಿ ನೀತಿಯಾಗಿದೆ. ಬಸವಣ್ಣ, ಭಗತ್ ಸಿಂಗ್, ರಾಷ್ಟ್ರ ಕವಿ ಕುವೆಂಪು ಅವರ ಚರಿತ್ರೆಯನ್ನು ಕೈಬಿಟ್ಟಾಗ ಆಯಾ ಸಮುದಾಯದವರು ಹೋರಾಟ ನಡೆಸಿದಾಗ ಪಠ್ಯದಲ್ಲಿ ಉಂಟಾಗಿರುವ ಲೋಪದೋಷಗಳ ಸರಿಪಡಿಸುವಿಕೆಗೆ ರೋಹಿತ್ ಚಕ್ರತೀರ್ಥ ಪಠ್ಯ ಪರಿಷ್ಕರಣೆ ಸಮಿತಿಯನ್ನು ವಿಸರ್ಜಿಸಿ ಸರಿಪಡಿಸುವ ಕೆಲಸವನ್ನು ಮಾಡಿತ್ತು. ಆದರೆ ಕೇರಳದಲ್ಲಿ ಮೇಲ್ವರ್ಗದವರ ಶೋಷಣೆ, ಅನಾಚಾರದ ವಿರುದ್ಧ ಹೋರಾಡಿ ಸಮಾಜದಲ್ಲಿ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ನಾರಾಯಣ ಗುರುಗಳ ಚರಿತ್ರೆಯ ಪಠ್ಯವನ್ನು ಕೈ ಬಿಟ್ಟಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಪ್ರಬಲ ಸಮುದಾಯವಾಗಿರುವ ಈಡಿಗ ಸಮುದಾಯ ರಾಜಕೀಯವಾಗಿ ನಿರ್ಣಾಯಕ ಪಾತ್ರವನ್ನು ಹೊಂದಿದೆ. ಬೇರೆ ದೊಡ್ಡ, ಚಿಕ್ಕ ಸಮುದಾಯಗಳಿಗೆ ನೆರವಾಗಲು ಈಗಾಗಲೇ ನಿಗಮ ಮಂಡಳಿಯನ್ನು ರಚಿಸಲಾಗಿದೆ. ನೂರಾರು ಕೋಟಿ ಅನುದಾನವನ್ನು ಒದಗಿಸಲಾಗಿದೆ. ಈ ಕುರಿತಂತೆ ಕಳೆದ ಒಂದು ವರ್ಷದಿಂದ ಸರ್ಕಾರದ ಮಟ್ಟದಲ್ಲಿ, ಹೊರಗಡೆ ಒತ್ತಡವಿದ್ದರೂ ನಿಗಮವನ್ನು ರಚಿಸದೇ ಮೌನ ವಹಿಸಿರುವುದು ಈಡಿಗ ಜನಾಂಗದ ಮೇಲೆ ಹೊಂದಿರುವ ತಾತ್ಸರ್ಯ ಮನೋಭಾವನೆಯಾಗಿದೆ ಎಂದು ಹೇಳಿದರು.

- Advertisement -

ಖಚಾಂಚಿ ದಿನೇಶ್, ರಂಗನಾಥ್ ಬಿ.ಎ. ಮಾತನಾಡಿ, ಉತ್ತರ ಕರ್ನಾಟಕದ ಕಲಬುರಗಿ ಸೇರಿದಂತೆ ಅನೇಕ ಕಡೆ ಶೇದಿ ಇಳಿಸುವ ವೃತ್ತಿಯಲ್ಲಿ ಈಡಿಗ ಜನಾಂಗದ ಸಾವಿರಾರು ಮಂದಿ ಅವಲಂಬನೆಯಾಗಿ ಜೀವನ ಸಾಗಿಸುತ್ತಿದ್ದಾರೆ. ಶೇದಿ ಬಂದ್ ಮಾಡಿರುವುದರಿಂದ ಉದ್ಯೋಗ ಕಳೆದುಕೊಂಡಿರುವ ಕುಟುಂಬಗಳಿಗೆ ಪರ್ಯಾಯ ಉದ್ಯೋಗ ನೀಡಬೇಕೆಂದು ಆಗ್ರಹಿಸಿದರು.

ಈ ಬೇಡಿಕೆಗಳನ್ನು ಅತೀ ಶೀಘ್ರದಲೇ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಈಡಿಗ ಸಮಾಜದ ಮುಖಂಡರಾದ ಸಂತೋಷ್ ಈಡಿಗ, ಕಲ್ಯಾಣ ಕುಮಾರ್, ಶಿವಕುಮಾರ್ ರಾಯನ್, ಶಿವಕುಮಾರ್, ವಕೀಲರಾದ ಲೋಕೇಶ್ ಕೆ.ಎನ್, ಮುಕುಂದ, ಪರಶುರಾಮ ಬಿಳಿಸಿರಿ, ಆದರ್ಶ, ಪ್ರದೀಪ್, ಜನಾರ್ದನ್, ಕೃಷ್ಞಪ್ಪ ಜಿ.ಕೆ. ಸತೀಶ್, ಗುರುಮೂರ್ತಿ, ಶಿವರಾಮ್ ಪೂಜಾರಿ, ನಾಗರಾಜ, ಶಿವಕುಮಾರ್ ಹರತಾಳ, ವಕೀಲೆ ಅನಿತಾ . ಎನ್. ಮತ್ತಿತರರು ಹಾಜರಿದ್ದರು.



Join Whatsapp