ಮಂಗಳೂರು: ಬ್ರಿಟಿಷ್ ಆಡಳಿತ ಕಾಲದಲ್ಲಿ ನಿರ್ಮಾಣವಾಗಿದ್ದ ಲೇಡಿಗೋಷನ್ ಆಸ್ಪತ್ರೆಯ ಹೆಸರು ಬದಲಾವಣೆಗೆ ಸಚಿವ ಸುನಿಲ್ ಕುಮಾರ್ ಮುಂದಾಗಿದ್ದು, ಇದು ವಿವಾದಕ್ಕೆ ಕಾರಣವಾಗಿದೆ.
ಈ ಬಗ್ಗೆ ನಗರದ ಖಾಸಗಿ ಹೊಟೇಲ್ ನಲ್ಲಿ ಮಾತನಾಡಿದ ಸಚಿವ ಸುನಿಲ್ ಕುಮಾರ್ , ಲೇಡಿಗೋಷನ್ ಹೆರಿಗೆ ಆಸ್ಪತ್ರೆಗೆ ಸ್ವಾತಂತ್ರ್ಯ ಹೋರಾಟಗಾರ್ತಿ ಉಳ್ಳಾದ ರಾಣಿ ಅಬ್ಬಕ್ಕ ಹೆಸರು ಇಡಲು ಸರಕಾರಕ್ಕೆ ಪ್ರಸ್ತಾವನೆ ನೀಡಲಾಗಿದೆ. ಸ್ವಾತಂತ್ರ್ಯ ಅಮೃತಮಹೋತ್ಸವದ ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ನಾಡಿಗೆ ಪರಿಚಯ ಮಾಡುವ ಅಗತ್ಯ ಇರುವ ಹಿನ್ನೆಲೆಯಲ್ಲಿ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಅಬ್ಬಕ್ಕನ ಹೆಸರಿಡಲು ಯಾರಾದರೂ ವಿರೋಧ ಮಾಡುತ್ತಾರೆಯೇ ಕಾದು ನೋಡುವ ಎಂದು ಹೇಳಿದರು.
ದ.ಕ.ಜಿಲ್ಲೆಯಲ್ಲಿ ವಿದ್ಯುತ್ ಬಳಕೆ ಹೆಚ್ಚಳವಾಗುತ್ತಿದ್ದು, ಸರಬರಾಜು ಕೂಡಾ ಅಧಿಕವಾಗಿದೆ. ಆದ್ದರಿಂದ 400 ಕೆವಿ ಸ್ಟೇಷನ್ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಇದಕ್ಕೆ ಮಂಗಳೂರಿನಲ್ಲಿ ಸ್ಥಳ ಗುರುತಿಸಲಾಗಿದೆ ಎಂದು ಹೇಳಿದರು.