ಭೋಪಾಲ್: ಕಾಂವಡ್ ಯಾತ್ರೆ ಮಾರ್ಗದಲ್ಲಿನ ತಿಂಡಿ–ತಿನಿಸುಗಳ ಅಂಗಡಿ ಮಾಲೀಕರು ತಮ್ಮ ಹೆಸರನ್ನು ಮಳಿಗೆಗಳ ಮುಂದೆ ಉಲ್ಲೇಖಿಸಬೇಕು ಎಂಬ ಯಾವುದೇ ಆದೇಶವನ್ನು ಹೊರಡಿಸಿಲ್ಲ ಎಂದು ಮಧ್ಯಪ್ರದೇಶದ ಸರ್ಕಾರ ಸ್ಪಷ್ಟಪಡಿಸಿದೆ.
ಉಜ್ಜಯಿನಿಯ ಮೇಯರ್ ಆದೇಶ ಕುರಿತು ಪ್ರತಿಕ್ರಿಯಿಸಿರುವ ನಗರಾಭಿವೃದ್ಧಿ ಮತ್ತು ವಸತಿ ಇಲಾಖೆ, ‘ನಗರ ಪ್ರದೇಶಗಳಲ್ಲಿನ ಕಾಂವಡ್ ಯಾತ್ರೆ ಮಾರ್ಗದಲ್ಲಿ ಅಂಗಡಿಗಳ ಮುಂದೆ ಮಾಲೀಕರ ಹೆಸರು, ಮೊಬೈಲ್ ಸಂಖ್ಯೆಯನ್ನು ಪ್ರದರ್ಶಿಸುವ ಬಗ್ಗೆ ರಾಜ್ಯ ಸರ್ಕಾರದ ಮಟ್ಟದಲ್ಲಿ ಯಾವುದೇ ಆದೇಶ ಹೊರಡಿಸಿಲ್ಲ’ ಎಂದು ತಿಳಿಸಿದೆ.
ಮಧ್ಯಪ್ರದೇಶದ ಪ್ರಾಚೀನ ನಗರ ಉಜ್ಜಯಿನಿಯಲ್ಲಿನ ಅಂಗಡಿಗಳ ಮುಂದೆ ಮಾಲೀಕರ ಹೆಸರು, ಮೊಬೈಲ್ ಸಂಖ್ಯೆಯನ್ನು ಪ್ರದರ್ಶಿಸಬೇಕು ಎಂದು ಅಲ್ಲಿನ ಮಹಾನಗರ ಪಾಲಿಕೆ ಭಾನುವಾರ ಆದೇಶ ಹೊರಡಿಸಿತ್ತು.