ಲಕ್ನೋ: ಸಾರ್ವಜನಿಕ ಸ್ಥಳದಲ್ಲಿ ನಮಾಝ್ ನಿರ್ವಹಿಸಿದ್ದಾರೆಂದು ಆರೋಪಿಸಿ ಎಐಎಂಐಎಂ ನಾಯಕಿ ಉಜ್ಮಾ ಪರ್ವೀನ್ ಮೇಲೆ ಲಕ್ನೋ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಎಐಎಂಐಎಂ ನಾಯಕ ಫೋಟೋವೊಂದನ್ನು ಟ್ವಿಟರ್’ನಲ್ಲಿ ಹಾಕಿದ ಮೇಲೆ ಈ ಪ್ರಕರಣವು ಬೆಳಕಿಗೆ ಬಂದಿದೆ.
ಉಜ್ಮಾ ಅವರು ವಿಧಾನ ಭವನ ಎಂದು ನಮಾಝ್ ಸಲ್ಲಿಸಿದ ಜಾಗವನ್ನು ತಪ್ಪಾಗಿ ತೋರಿಸಿ ಜನರನ್ನು ತಪ್ಪು ದಾರಿಗೆಳೆದಿದ್ದಾರೆ ಎಂದು ಕೇಂದ್ರ ವಲಯ ಉಪ ಪೊಲೀಸ್ ಅಧೀಕ್ಷಕರಾದ ಅಪರ್ಣ ರಜತ್ ಕೌಶಿಕ್ ಹೇಳಿದ್ದಾರೆ.
ಕಳೆದ ವರ್ಷ ಅಂತಾರಾಷ್ಟ್ರೀಯ ಮಾಲ್ ಸರಣಿಯೊಂದರ ಶಾಖೆ ಲಕ್ನೋದಲ್ಲಿ ತೆರೆಯಲ್ಪಟ್ಟ ಬೆನ್ನಿಗೆ ಅಲ್ಲಿ ಎಂಟು ಜನರು ನಮಾಝ್ ಸಲ್ಲಿಸಿದ ಫೋಟೋ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು. ಅನಂತರ ಅವರೆಲ್ಲರನ್ನು ಬಂಧಿಸಲಾಗಿತ್ತು.
ಉಜ್ಮಾ ಅವರು ಮೆಟ್ರೋ ನಿಲ್ದಾಣದಲ್ಲಿ ನಮಾಝ್ ಸಲ್ಲಿಸಿದ್ದಾರೆ. ಆಮೇಲೆ ಫೋಟೋ ಪೋಸ್ಟ್ ಮಾಡಿ “ಎಲ್ಲರೂ ಎಲ್ಲಿ ಬೇಕಾದರೂ ಪ್ರಾರ್ಥನೆ ಸಲ್ಲಿಸುವ ಮುಕ್ತ ಅವಕಾಶ ಹೊಂದಿದ್ದಾರೆ; ಹಾಗೆಯೇ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸಲು ಕೂಡ” ಎಂದು ಬರೆದಿದ್ದಾರೆ.
“ಐಪಿಸಿ 153ಎ, ತಪ್ಪು ಮಾಹಿತಿ ನೀಡಿಕೆ ಐಪಿಸಿ 200, ಸಾರ್ವಜನಿಕ ಸ್ಥಳದಲ್ಲಿ ಅಡಚಣೆ ಐಪಿಸಿ 283 ಸೆಕ್ಷನ್ ಗಳಡಿ ಉಜ್ಮಾ ವಿರುದ್ಧ ಪ್ರಕರಣ ದಾಖಲಾಗಿದೆ” ಎಂದು ಡಿಸಿಪಿ ತಿಳಿಸಿದ್ದಾರೆ.