ನವದೆಹಲಿ: ನಾಗಾಲ್ಯಾಂಡ್ ನ ಮೋನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಗೆ ಬಲಿಯಾದ 14 ನಾಗರಿಕರ ಹತ್ಯೆಯ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗಳು ತೀವ್ರಗೊಂಡಿದೆ. ನಾಗಾಲ್ಯಾಂಡ್ ನ ಪೂರ್ವ ಭಾಗದಲ್ಲಿ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನ್ಯಾಯ ಕೋರಿ ಗುರುವಾರ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ಈಸ್ಟರ್ನ್ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಶನ್ (ENPO) ಸದಸ್ಯರು ಮೋನ್ ಜಿಲ್ಲೆಯಲ್ಲಿ ಒಂದು ದಿನದ ಬಂದ್ ಗೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ತುಯೆನ್ಸಾಂಗ್, ಲಾಂಗ್ಲೆಂಗ್, ಕಿಫಿರ್ ಮತ್ತು ನೋಕ್ಲಾಕ್ ಜಿಲ್ಲೆಗಳಲ್ಲಿ ಬಂದ್ ಆಚರಿಸಲಾಗುತ್ತಿದ್ದು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ.
ಸೇನೆಯಿಂದ ಹತ್ಯೆಯಾದವರ ಕುಟುಂಬಗಳಿಗೆ ನ್ಯಾಯ ಒದಗಿಸುವವರೆಗೆ ನಾಗರಿಕರು ಭದ್ರತಾ ಪಡೆಗಳೊಂದಿಗೆ ಅಸಹಕಾರ ಘೋಷಿಸಿದ್ದಾರೆ.
ದಶಕದಷ್ಟು ಹಳೆಯದಾದ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (AFSPA) ಅನ್ನು ಹಿಂಪಡೆಯಬೇಕೆಂದು ಪ್ರತಿಭಟನಕಾರರು ಒತ್ತಾಯಿಸಿದ್ದಾರೆ.