ಮೈಸೂರು: ನಿರಂತರ ಸುರಿಯುತ್ತಿರುವ ಮಳೆಯಿಂದ ಮೈಸೂರಿನ ಮಹಾರಾಣಿ ಕಾಲೇಜಿನ ಹಳೆಯ ಕಟ್ಟಡ ಕುಸಿದಿದ್ದು ಸ್ಥಳದಲ್ಲಿ ವಿದ್ಯಾರ್ಥಿಗಳು ಇಲ್ಲದ ಕಾರಣ ದುರಂತ ತಪ್ಪಿದೆ.
ಪಾರಂಪರಿಕ ಕಟ್ಟಡವಾದ ಇದರಲ್ಲಿ ವಿಜ್ಞಾನ ವಿಭಾಗದ ಲ್ಯಾಬ್ ಇತ್ತು. ನೂರಾರು ವರ್ಷಗಳ ಹಳೆಯ ಕಾಲದ ಕಟ್ಟಡವಾಗಿದ್ದರಿಂದ ಶಿಥಿಲಗೊಂಡು ಮಳೆಗೆ ಕುಸಿಯುವ ಭೀತಿಯಲ್ಲಿಯೇ ಇತ್ತು. ನಿರಂತರ ಮಳೆಯಿಂದಾಗುವ ಅಪಾಯ ಅರಿತ ಪ್ರಾಂಶುಪಾಲರು ಇಂದು ಬೆಳಗ್ಗೆ ಕಟ್ಟಡದ ವಿದ್ಯುತ್ ಕಡಿತ ಮಾಡಿಸಿದ್ದರು.
ಮೂರು ಕೊಠಡಿ ಒಳಗೊಂಡಂತೆ ಕಟ್ಟಡ ಸಂಪೂರ್ಣ ನೆಲಸಮ ಆಗಿದೆ ಎನ್ನಲಾಗಿದೆ. ಪಾರಂಪರಿಕ ಕಟ್ಟಡದ ಜೀರ್ಣೋದ್ಧಾರ ನಡೆಯಲು 2 ಕೋಟಿ ರೂ. ಹಣ ಕೂಡ ಬಿಡುಗಡೆ ಆಗಿತ್ತು. ಸದ್ಯಕ್ಕೆ ಎರಡು ದಿನಗಳು ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ವಿದ್ಯಾರ್ಥಿಗಳ ಪೋಷಕರು ಆತಂಕ ಪಡಬೇಕಿಲ್ಲ. ಹೊಸ ಕಟ್ಟಡದಲ್ಲಿ ತರಗತಿ ಆರಂಭ ಮಾಡುತ್ತೇವೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.